ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ರೋಗಿಗಳಿಗೆ ಗುಡ್‌ಲೈಫ್ ಹಾಲು ವಿತರಿಸಲಾಯಿತು. ಉದ್ದನೂರು ಪ್ರಸಾದ್, ಡಾ.ಪ್ರಕಾಶ್, ರಘು, ರವೀಂದ್ರ, ರವಿ ಇತರರಿದ್ದರು.
Published on:
Copied
Follow Us
ಹನೂರು:ಹಾಲು ಅತ್ಯಂತ ಪೌಷ್ಟಿಕ ಆಹಾರವಾಗಿದ್ದು, ಉತ್ತಮ ಆರೋಗ್ಯ ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಚಾಮುಲ್ ಉಪ ಕೇಂದ್ರದ ವತಿಯಿಂದ ರೋಗಿಗಳಿಗೆ ಗುಡ್‌ಲೈಫ್ ಹಾಲು ವಿತರಿಸಿ ಮಾತನಾಡಿದರು.
ಹನೂರು ಭಾಗದಲ್ಲಿ ಹೆಚ್ಚಿನ ರೈತರು ಕೃಷಿಯ ಜತೆಗೆ ಜೀವನೋಪಾಯಕ್ಕಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಇಲ್ಲಿ ಕಳೆದ 2 ವರ್ಷದಿಂದ ಸಮರ್ಪಕ ಮಳೆಯಾಗದಿದ್ದರೂ ಇಲ್ಲಿನ ರೈತರು ಹೈನುಗಾರಿಯನ್ನು ಬಿಟ್ಟಿಲ್ಲ. ಹಾಗಾಗಿ ಜಿಲ್ಲೆಯಲ್ಲಿಯೇ ಹನೂರು ತಾಲೂಕು ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಪ್ರತಿದಿನ 3 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದರೆ, ತಾಲೂಕಿನಲ್ಲಿ 1 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಸಂಗ್ರಹವಾಗುತ್ತಿರುವುದು ಸಂತಸದ ಸಂಗತಿ. ಹಾಲು ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಡಿ ಹಾಗೂ ಇತರ ಪೋಷಕಾಂಶಗಳ ಪ್ರಮುಖ ಮೂಲವಾಗಿದೆ. ಮೂಳೆಗಳು, ಹಲ್ಲುಗಳ ಬಲವರ್ಧನೆ ಹಾಗೂ ಮಕ್ಕಳ ಬೆಳವಣಿಗೆ ಅಗತ್ಯವಾಗಿದೆ. ಆದ್ದರಿಂದ ಹಾಲು ಸೇವನೆ ಉತ್ತಮ ಆರೋಗ್ಯ ಹೊಂದುವಲ್ಲಿ ಸಹಕಾರಿಯಾಗಿದೆ. ಹಾಲು ಹಾಗೂ ಇದರ ಉತ್ಪನ್ನಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಸಂಸ್ಥೆ 2001ರಿಂದಲೂ ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತಿದೆ. ಹನೂರಿನಲ್ಲಿ ಈ ಬಾರಿ ರೋಗಿಗಳಿಗೆ ಗುಡ್‌ಲೈಫ್ ಹಾಲು ವಿತರಿಸುವುದರ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ವೈದ್ಯಾಧಿಕಾರಿ ಡಾ.ರಾಜೀವ್, ಚಾಮುಲ್ ವಿಸ್ತರಣಾಧಿಕಾರಿ ರಘು, ಪಪಂ ಮಾಜಿ ಸದಸ್ಯ ಹರೀಶ್‌ಕುಮಾರ್, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳಾದ ರವೀಂದ್ರ, ಪ್ರಕಾಶ್‌ನಾಯ್ಡು, ಇಳಯಮೂರ್ತಿ, ಮರಿಗೌಡ, ಶ್ರೀಧರ್, ಚಂಗುಮಣಿ, ನಂದಿನಿ ಉತ್ಪನ್ನಗಳ ಕೇಂದ್ರದ ಮಾಲೀಕ ರವಿ ಇನ್ನಿತರರಿದ್ದರು.