ಗುಂಡ್ಲುಪೇಟೆಯಲ್ಲಿ ನಿಲ್ಲದ ಟಿಪ್ಪರ್‌ಗಳ ಹಾವಳಿ

ಗುಂಡ್ಲುಪೇಟೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಓವರ್ ಲೋಡ್ ತುಂಬಿದ ಟಿಪ್ಪರುಗಳು.
ಗುಂಡ್ಲುಪೇಟೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಓವರ್ ಲೋಡ್ ತುಂಬಿದ ಟಿಪ್ಪರುಗಳು.
Published on

ಪ್ರಮುಖ ಮುಖ್ಯಾಂಶಗಳು

  • ಕೂದಲೆಳೆ ಅಂತರದಲ್ಲಿ ಶಾಲಾ ವಾಹನ ಪಾರು
  • ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಗುಂಡ್ಲುಪೇಟೆ: ತಾಲೂಕಿನ ಚಿಕ್ಕತುಪ್ಪೂರು ಸಮೀಪ ಶಾಲಾ ಮಕ್ಕಳಿದ್ದ ಟೆಂಪೋಗೆ ಕಲ್ಲು ಹೊತ್ತು ಸಾಗುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಘಟನೆ ಮರೆಯುವ ಮೊದಲೇ ಅಂಥದ್ದೇ ಘಟನೆ ಬೊಮ್ಮನಹಳ್ಳಿ ರಸ್ತೆಯಲ್ಲಿ ನಡೆದಿದ್ದು, ಶಾಲಾ ವಾಹನ ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಬುಧವಾರ ಮಧ್ಯಾಹ್ನ 3 ಗಂಟೆಗೆ ಕಂಪನಮಹದೇಶ್ವರ ದೇವಾಲಯದ ಬಳಿ ಅತಿವೇಗವಾಗಿ ಬರುತ್ತಿದ್ದ ಕಲ್ಲು ತುಂಬಿದ ಟಿಪ್ಪರ್ ತೆರಕಣಾಂಬಿಯ ಖಾಸಗಿ ಕಾನ್ವೆಂಟ್‌ನಿಂದ ಮಕ್ಕಳನ್ನು ಕಿಲಗೆರೆಗೆ ಕರೆದೊಯ್ಯುತ್ತಿದ್ದ ಟೆಂಪೋವಿನ ತೀರ ಹತ್ತಿರಕ್ಕೆ ಬಂದಿದೆ. ಇದರಿಂದ ಆತಂಕಗೊಂಡ ಮಕ್ಕಳು ಜೋರಾಗಿ ಕೂಗಿಕೊಂಡಿದ್ದಾರೆ. ಕೂಡಲೇ ಎಚ್ಚೆತ್ತ ಚಾಲಕ ಟೆಂಪೋವನ್ನು ರಸ್ತೆಯ ಎಡಬದಿಗೆ ತೆಗೆದುಕೊಂಡು ಹೋಗುವ ಮೂಲಕ ಭಾರಿ ಅನಾಹುತ ತಪ್ಪಿಸಿದ್ದಾನೆ.
ಘಟನೆ ನಂತರವೂ ಟಿಪ್ಪರ್ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದು, ಅದರ ನೋಂದಣಿ ಸಂಖ್ಯೆ ತಿಳಿದುಬಂದಿಲ್ಲ. ಇದನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು ಎಂದು ಕಿಲಗೆರೆ ಗ್ರಾಮದ ಮಹೇಂದ್ರ ಕುಮಾರ್ ಎಂಬುವರು ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ವಶಕ್ಕೆ: ಮಾ.17ರಂದು ಚಿಕ್ಕತುಪ್ಪೂರು ಗೇಟ್ ಸಮೀಪ ರಸ್ತೆಯ ಗುಂಡಿ ತಪ್ಪಿಸಲು ಬಲಕ್ಕೆ ಬಂದ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಶಾಲಾ ಮಕ್ಕಳಿದ್ದ ಟೆಂಪೋಗೆ ಡಿಕ್ಕಿ ಹೊಡೆದು 8 ಮಕ್ಕಳಿಗೆ ತೀವ್ರ ಪೆಟ್ಟಾಗಿತ್ತು. ಅಪಘಾತದಲ್ಲಿ ಟೆಂಪೋ ಚಾಲಕನ ಕಾಲು ಮುರಿದಿತ್ತು. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಹಾಗೂ ಸಂಘಟನೆಯವರು ಬೀದಿಗಿಳಿದು ಪ್ರತಿಭಟನೆ ನಡೆಸಿ ಅಕ್ರಮ ಕಲ್ಲು ಸಾಗಣೆಯಲ್ಲಿ ತೊಡಗಿರುವ ಟಿಪ್ಪರ್‌ಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಶಾಸಕ ಗಣೇಶ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ನಿಯಮಬಾಹಿರವಾಗಿ ಕಲ್ಲುಸಾಗಣೆ ಮಾಡುವ ಟಿಪ್ಪರ್ ವಶಕ್ಕೆ ಪಡೆಯಲು ಹಾಗೂ ಶಾಲಾ ಸಮಯಗಳಲ್ಲಿ ಟಿಪ್ಪರ್ ವಾಹನ ಸಂಚಾರ ಬಂದ್ ಮಾಡಲಾಗುವುದು ಎಂದು ತಿಳಿಸಿದ್ದರು. ಈ ಬೆನ್ನಲ್ಲೇ ಗುಂಡ್ಲುಪೇಟೆ ಪೊಲೀಸರು ಓವರ್ ಲೋಡ್ ತುಂಬಿಸಿಕೊಂಡು ಮೇಲೊದಿಕೆ ಇಲ್ಲದೆ ಸಂಚಾರ ಮಾಡುತ್ತಿದ್ದ ಟಿಪ್ಪರ್ ವಶಕ್ಕೆ ಪಡೆದಿದ್ದರು. ಆದರೂ ಟಿಪ್ಪರ್‌ಗಳು ಯಾವುದೇ ಸುರಕ್ಷತೆಯಿಲ್ಲದೆ ಸಂಚರಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net