ಅಪಘಾತಗಳ ತಡೆಗೆ ಸಂಚಾರ ನಿಯಮ ಪಾಲಿಸಿ

ಹನೂರಿನಲ್ಲಿ ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ಧ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಉದ್ಘಾಟಿಸಿದರು. ಸುನೀತಾ, ಕಾವ್ಯಶ್ರೀ, ಆನಂದಮೂರ್ತಿ, ನಾಗರಾಜು ಇತರರು ಇದ್ದರು.
ಹನೂರಿನಲ್ಲಿ ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ಧ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಉದ್ಘಾಟಿಸಿದರು. ಸುನೀತಾ, ಕಾವ್ಯಶ್ರೀ, ಆನಂದಮೂರ್ತಿ, ನಾಗರಾಜು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಸಲಹೆ
  • ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ
ಹನೂರು : ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸದೆ ಇರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲದ ನ್ಯಾಯಾಲಯದಲ್ಲಿ 600ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ತಿಳಿಸಿದರು. 
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ತಾಲೂಕು ಆಡಳಿತ, ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೊಲೀಸ್, ಶಿಕ್ಷಣ, ಆರೋಗ್ಯ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿರುವುದು. ಸೀಟ್ ಬೆಲ್ಟ್ ಧರಿಸದಿರುವಿಕೆ, ವಾಹನ ಪರವಾನಗಿ ಇಲ್ಲದೆ ಇರುವುದು, ಮದ್ಯ ಸೇವನೆ, ವಿಮೆ ಇಲ್ಲದೆ ವಾಹನ ಚಲಾಯಿಸುವಿಕೆ, ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದು ಕಾನೂನಿನ ಅಪರಾಧ. ಆದರೆ ಇತ್ತೀಚಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಸವಾರರು ಪಾಲಿಸದೆ ಇರುವುದರಿಂದ ಸಂಭವಿಸುವ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವು ನೋವುಗಳು ಸಂಭವಿಸುತ್ತಿದೆ. ಆದ್ದರಿಂದ ಅಪಘಾತದ ತಡೆಗೆ ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಇತರರಲ್ಲೂ ಅರಿವು ಮೂಡಿಸಬೇಕು. ಇದರಿಂದ ಅಪಘಾತವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 
ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಮಾತನಾಡಿ, ಆಟೋಗಳಲ್ಲಿ ಚಾಲಕ ಸೇರಿದಂತೆ ನಾಲ್ವರಿಗೆ ಮಾತ್ರ ಅವಕಾಶ. ಆದರೆ ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದೊಯ್ಯಲಾಗುತ್ತಿದೆ. ಇದು ಅಪರಾಧ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು. ಇನ್ನು ಮದ್ಯ ಸೇವಿಸಿ ವಾಹನ ಚಲಾಯಿಸದರೆ 10 ಸಾವಿರ ರೂ. ದಂಡವನ್ನು ವಿಧಿಸಲಾಗುತ್ತದೆ ಎಂದರು.
ವಕೀಲರಾದ ನಾಗರಾಜು, ನಂದಕುಮಾರ್, ತಾಪಂ ಲೆಕ್ಕ ಸಹಾಯಕಿ ಶಶಿಕಲಾ, ಪಪಂ ಆರೋಗ್ಯ ನಿರೀಕ್ಷಕ ಪ್ರಕಾಶ್ ಇತರರು ಇದ್ದರು. 
ನ್ಯಾಯಾಧೀಶರಿಂದ ಆಕ್ಷೇಪ: ವಿವಿಧ ಇಲಾಖೆಯ ಸಹಯೋಗದೊಂದಿಗೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಂಜೆ 4 ಗಂಟೆಗೆ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದರಂತೆಯೇ 4ರ ಸುಮಾರಿಗೆ ಕೊಳ್ಳೇಗಾಲ ನ್ಯಾಯಾಲಯದ ನ್ಯಾಯಾಧೀಶ ಶ್ರೀಕಾಂತ್, ಸುನೀತಾ ಹಾಗೂ ಕಾವ್ಯಶ್ರೀ ಅವರು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಈ ವೇಳೆ ಸಭೆಯಲ್ಲಿ ಜನರು ಭಾಗವಹಿಸದಿರುವಿಕೆ ಒಂದೆಡೆಯಾದರೆ, ಯಾವೊಬ್ಬ ಇಲಾಖೆಯ ಅಧಿಕಾರಿಗಳು ಸಹ ಇರಲಿಲ್ಲ. ಈ ಅವ್ಯವಸ್ಥೆಯ ಬಗ್ಗೆ ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ. ಕಾವ್ಯಶ್ರೀ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಹಾಜರಿರದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲು ಕ್ರಮವಹಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು. ಬಳಿಕ ಇನ್‌ಸ್ಪೆಕ್ಟರ್ ಆನಂದಮೂರ್ತಿ, ಆರೋಗ್ಯಾಧಿಕಾರಿ ಡಾ. ಪ್ರಕಾಶ್ ಹಾಗೂ ಕೆಲ ಸಿಬ್ಬಂದಿ ಆಗಮಿಸಿದರು. ಬಳಿಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net