ಜೋಡಿರಸ್ತೆಯ ಅಂದ ಹೆಚ್ಚಿಸುತ್ತಿರುವ ಹೂಗಳು

ಚಾಮರಾಜನಗರದ ಬಿ.ರಾಚಯ್ಯ ಜೋಡಿರಸ್ತೆ ಬದಿಯಲ್ಲಿರುವ ಟಬೆಬುಯಾ ಮರಗಳು ಹೂಗಳ ರಾಶಿಯಿಂದ ಕಂಗೊಳಿಸುತ್ತಿರುವುದು.
ಚಾಮರಾಜನಗರದ ಬಿ.ರಾಚಯ್ಯ ಜೋಡಿರಸ್ತೆ ಬದಿಯಲ್ಲಿರುವ ಟಬೆಬುಯಾ ಮರಗಳು ಹೂಗಳ ರಾಶಿಯಿಂದ ಕಂಗೊಳಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆಬದಿಯ ಟಬೆಬುಯಾ ಮರಗಳಲ್ಲಿ ಅರಳಿರುವ ಹೂಗಳು
  • ಬಿಳಿ ಮತ್ತು ಗುಲಾಬಿ ಹೂಗಳ ಸೊಬಗು
  • ವಿದ್ಯುತ್ ತಂತಿಗಳ ತೊಡಕು
ಚಾಮರಾಜನಗರ: ಪ್ರತಿವರ್ಷ ವಸಂತ ಋತುವಿನಲ್ಲಿ ಮಾತ್ರ ಹೂಗಳನ್ನು ಬಿಡುವ ಟಬೆಬುಯಾ ಮರಗಳ ಹೂಗಳ ರಾಶಿ ಜೋಡಿರಸ್ತೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ನಗರದ ಬಿ.ರಾಚಯ್ಯ ಜೋಡಿರಸ್ತೆಯ ಜಿಲ್ಲಾಸ್ಪತ್ರೆಯ ಮುಂಭಾಗ, ಶ್ರೀಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿ ಮುಂಭಾಗ, ಜಿಲ್ಲಾಡಳಿತ ಭವನದ ಮುಖ್ಯದ್ವಾರ ಎದುರಿನಲ್ಲಿ ಇರುವ ರಸ್ತೆ ಬದಿಯಲ್ಲಿರುವ ಟಬೆಬುಯಾ ಮರಗಳಲ್ಲಿ ಬಿಳಿ ಮತ್ತು ಗುಲಾಬಿ ಬಣ್ಣದ ಹೂಗಳ ರಾಶಿ ತುಂಬಿದ್ದ, ನೋಡುಗರ ಗಮನಸೆಳೆಯುತ್ತಿದೆ. ಟಬೆಬುಯಾ ಅಥವಾ ಪಿಂಕ್ ಟ್ರೀ ಎಂದು ಕರೆಯಲ್ಪಡುವ ಈ ಮರಗಳು ದಕ್ಷಿಣ ಅಮೇರಿಕಾದ ಮೂಲದಾಗಿದ್ದು, ಅದರ ಸುಂದರವಾದ ಹೂಗಳಿಂದ ರಸ್ತೆಗಳು ಹಾಗೂ ಉದ್ಯಾನವನಗಳ ಅಂದವನ್ನು ಹೆಚ್ಚಿಸುತ್ತದೆ.
ಈ ಮರಗಳನ್ನು ಹೆಚ್ಚಾಗಿ ಉದ್ಯಾನಗಳಲ್ಲಿ ಮತ್ತು ರಸ್ತೆ ಬದಿಯಲ್ಲಿ ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಪರಿಸರದ ಮೇಲಿನ ಕಾಳಜಿಯಿಂದ ಸಾಲುಮರದ ವೆಂಕಟೇಶ್ ಅವರು ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲದೇ ಇನ್ನಿತರೆ ರಸ್ತೆಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಅವರು ಜೋಡಿರಸ್ತೆಯ ಅಂದವನ್ನು ಹೆಚ್ಚಿಸಲು ಹಾಕಿದ್ದ ಗಿಡಗಳು ಇಂದು ರಾಶಿ ರಾಶಿ ತುತ್ತೂರಿಯಾಕಾರದ ಹೂಗಳನ್ನು ಹೊತ್ತುಕೊಂಡಿವೆ. ಈ ಮರಗಳು ವರ್ಷದಲ್ಲಿ ಒಮ್ಮೆ ವಸಂತ ಕಾಲದಲ್ಲಿ ಮಾತ್ರ ಹೂಗಳನ್ನು ಬಿಡುತ್ತದೆ. ಬೇರೆಯ ಸಮಯದಲ್ಲಿ ಎಲೆಗಳಿಂದ ಆವೃತ್ತವಾಗಿರುತ್ತದೆ. ಈ ಸಮಯದಲ್ಲಿ ಜೋಡಿರಸ್ತೆಯ ಸೌಂದರ್ಯವನ್ನು ಹೆಚ್ಚಿಸುತ್ತಿದೆ.
ವಿದ್ಯುತ್ ತಂತಿಗಳ ತೊಡಕು:
ನಗರದ ಜೋಡಿರಸ್ತೆ ಬದಿಯಲ್ಲಿರುವ ಟಬೆಬುಯಾ ಮರಗಳು ಈಗಷ್ಠೇ ಬೆಳವಣಿಗೆ ಕಾಣುತ್ತಿದ್ದು, ಎರಡು ಬದಿಯಲ್ಲೂ ಹಾದುಹೋಗಿರುವ ವಿದ್ಯುತ್ ತಂತಿಗಳು ಮರಗಳ ಬೆಳವಣಿಗೆಗೆ ತೊಡಕಾಗಿದೆ. ಮರಗಳು ಬೆಳವಣಿಗೆಯಾಗುತ್ತಲೇ ವಿದ್ಯುತ್ ಇಲಾಖೆಯವರು ಬರಗಳ ರೆಂಬೆಗಳನ್ನು ಆಗಾಗ ಕತ್ತರಿಸುತ್ತಾರೆ. ಇದರಿಂದ ಮತ್ತಷ್ಟು ಎತ್ತರ ಮತ್ತು ಹಗಲವಾಗಿ ಬೆಳೆಯಬೇಕಿರುವ ಮರಗಳಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಪರಿಸರ ಪ್ರೇಮಿಗಳು ಆಗಾಗ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಜೋಡಿರಸ್ತೆಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ವಿದ್ಯುತ್ ಕೇಬಲ್‌ಗಳಾಗಿ ಪರಿವರ್ತಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಬಿ.ರಾಚಯ್ಯ ಜೋಡಿರಸ್ತೆಯ ಡರಡು ಬದಿಯಲ್ಲೂ ಟಬೆಬುಯಾ ಮರಗಳನ್ನು ನೆಡಬೇಕು ಎಂದು ನಿಧಾಧರ ಮಾಡಿದ್ದೆ. ಆದರೆ ಕೆಲವು ಕಾರಣಗಳಿಂದ ಸಾಧ್ಯವಾಗಲಿಲ್ಲ. ಆದರೆ ಕೆಲವು ಕಡೆ ನೆಟ್ಟಿರುವ ಮರಗಳಲ್ಲಿರುವ ಹೂಗಳ ರಾಶಿಯನ್ನು ನೋಡಿದರೇ ಖುಷಿಯಾಗುತ್ತದೆ. ಜೋಡಿರಸ್ತೆಯಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳನ್ನು ವಿದ್ಯುತ್ ಕೇಬಲ್‌ಗಳಾಗಿ ಪರಿವರ್ತಿಸಿದರೇ ಮತ್ತಷ್ಟು ಅನುಕೂಲವಾಗುತ್ತದೆ.
-ಸಿ.ಎಂ.ವೆಂಕಟೇಶ್, ಪರಿಸರ ಪ್ರೇಮಿ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net