ಹನೂರು:ಮಾರ್ಟಳ್ಳಿ ಭಾಗಕ್ಕೆ ಏತ ನೀರಾವರಿ ಯೋಜನೆ ರೂಪಿಸುವ ಸಂಬಂಧ ಒಂದು ವಾರದೊಳಗೆ ಡಿಪಿಆರ್ ಸಿದ್ಧಪಡಿಸಿ ವರದಿ ಸಲ್ಲಿಸುವಂತೆ ಸಂಸದ ಸುನೀಲ್ ಬೋಸ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ಧ ಜನಸಂಪರ್ಕ ರೈತರು ಹಾಗೂ ಸಾರ್ವಜನಿಕರಿಂದ ಸಮಸ್ಯೆ ಆಲಿಸಿ ಮಾತನಾಡಿದರು.
ಜೆಜೆಎಂ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳುವ ವೇಳೆ ಎಲ್ಲ ಕಡೆ ಉತ್ತಮವಾಗಿದ್ದ ಸಿಸಿ ರಸ್ತೆಯನ್ನು ಅಗೆದು ಸರಿಯಾಗಿ ಮುಚ್ಚಿಲ್ಲ. ಕಾಮಗಾರಿ ಕಳಪೆಯಾಗಿದೆ ಎಂದು ಸಾಕಷ್ಟು ದೂರುಗಳು ಬಂದಿವೆ. ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮವಹಿಸುವಂತೆ ಜಿಪಂ ಉಪ ಕಾರ್ಯದರ್ಶಿ ಶ್ರುತಿ ಅವರಿಗೆ ಸೂಚಿಸಿದರು. ಹನೂರು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವಂತೆ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ವಿದ್ಯುತ್ ಕಾಮಗಾರಿಯನ್ನು ಕೈಗೊಳ್ಳಲು ಅನುಮತಿ ನೀಡುವ ಸಂಬಂಧ ಅಗತ್ಯ ಕ್ರಮವಹಿಸುವಂತೆ ಎಸಿಎಫ್ ಶಿವರಾಜು ಅವರಿಗೆ ಸೂಚಿಸಿದರು. ಇನ್ನು ಮಾರ್ಟಳ್ಳಿ ಭಾಗಕ್ಕೆ ನೀರಾವರಿ ಯೋಜನೆಯನ್ನು ರೂಪಿಸುವ ಸಂಬಂಧ ಒಂದು ವಾರದೊಳಗೆ ಡಿಪಿಆರ್ ಸಿದ್ಧಪಡಿಸಿ ವರದಿ ಸಲ್ಲಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಆಗ್ರಹಿಸಿ ಕಳೆದ 85 ದಿನಗಳಿಂದ ವಡಕೆಹಳ್ಳದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಆದರೆ ಯಾವುದೇ ಕ್ರಮವಾಗಿಲ್ಲ ಎಂದು ಗಮನಕ್ಕೆ ತಂದರು. ಈ ಬಗ್ಗೆ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಎಇಇಗಳಾದ ರಾಮಕೃಷ್ಣ, ಕರುಣಾಮಯಿ ಅವರಿಂದ ಸಂಸದರು ಮಾಹಿತಿ ಪಡೆದರು. ಆದರೆ ಈ ಯೋಜನೆಗೆ ಎಇಇ ಯಾರು ಎಂದು ಸಂಸದರು ಪ್ರಶ್ನಿಸಿದಾಗ ಅಧಿಕಾರಿಗಳಿಗೇ ಈ ಬಗ್ಗೆ ಮಾಹಿತಿ ಇಲ್ಲದೇ ಇದ್ದದ್ದು ತೀವ್ರ ಟೀಕೆಗೆ ಕಾರಣವಾಯಿತು.
ಇನ್ನು ಸಭೆಯಲ್ಲಿ ತಾಲೂಕು ರೈತರ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್, ಇತರ ರೈತರು ಮಾತನಾಡಿ ತಮ್ಮ ಭಾಗದ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಳ್ಯ ರಾಚಯ್ಯ, ಎಎಸ್ಪಿ ಶಶಿಧರ್, ಎಸಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಕೆ.ಎನ್. ಚೈತ್ರಾ, ತಾಪಂ ಇಒ ಉಮೇಶ್, ಡಿವೈಎಸ್ಪಿ ಧರ್ಮೇಂದ್ರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.