ಸಂಭ್ರಮದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ

ಕೊಳ್ಳೇಗಾಲ ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.
ಕೊಳ್ಳೇಗಾಲ ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.
Published on
ಕೊಳ್ಳೇಗಾಲ: ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಇತ್ತೀಚೆಗೆ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.
ಕಾವೇರಿ ರಸ್ತೆಯ ನಾರಾಯಣಸ್ವಾಮಿ ಗುಡಿ ಬೀದಿಯಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ಕೈಂಕರ್ಯ ನಡೆದವು. ದೇವಾಲಯವನ್ನು ತಳಿರು-ತೋರಣ, ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು.
ಶ್ರೀದೇವಿ, ಭೂದೇವಿ, ಸೌಮ್ಯಾಲಕ್ಷ್ಮೀ ಸಮೇತ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿಯ ಉತ್ಸವ ಮೂರ್ತಿಯನ್ನು ತೇರಿನ ಮೇಲೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮಂಗಳವಾದ್ಯ, ಜಾಗಟೆ ಹಾಗೂ ಶಂಖನಾದ ಮೊಳಗಿದವು. ಬಳಿಕ ರಾಜ ಬೀದಿಗಳಲ್ಲಿ ರಥೋತ್ಸವವನ್ನು ಭಕ್ತರು ಎಳೆದರು. ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಿಂದ ಆಗಮಿಸಿದ್ದ ಸಾವಿರಾರು ಜನರು ಹಣ್ಣು-ಜವನ ಎಸೆದರು. ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಥೋತ್ಸವ ವೇಳೆ ಸೇವಾರ್ಥದಾರರು ಬಾಳೆ ಹಣ್ಣು, ಮಜ್ಜಿಗೆ, ಪಾನಕ, ಕೊಸಂಬರಿ ವಿತರಿಸಿದರು. ಪ್ರಧಾನ ಅರ್ಚಕ ಶೇಷಾದ್ರಿ ಭಟ್, ಸುದರ್ಶನ್ ಭಟ್, ಟಿ.ವಿ.ಎಸ್.ರಾಘವನ್, ನಂದಕುಮಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ರಥೋತ್ಸವದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು, ಅಪರ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ತಹಸೀಲ್ದಾರ್ ಬಸವರಾಜು, ನಗರಸಭೆ ಪೌರಾಯುಕ್ತರಾದ ರುದ್ರಮ್ಮ ಶರಣಯ್ಯ ಇದ್ದರು. ಡಿವೈಎಸ್ಪಿ ಎಂ.ಧಮೇರ್ಂದ್ರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನಿಯೋಜಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net