ಜಿಲ್ಲೆಯಲ್ಲಿ 18-19 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದ್ದು, ಯಾವ ಗ್ರಾಮದಲ್ಲೂ ಮೇವಿನ ಕೊರತೆಯಾಗಿದೆ ಎಂಬ ದೂರುಗಳು ಬಂದಿಲ್ಲ. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾದರೇ, ಮೇವು ಖರೀದಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಯಾವ ಗ್ರಾಮಗಳಲ್ಲಿ ಸಮಸ್ಯೆ ಉಂಟಾಗಬಹುದು ಎಂದು ಗುರುತು ಮಾಡಲಾಗಿದೆ. ಆ ವ್ಯಾಪ್ತಿಯಲ್ಲಿ ಮೇವಿನ ಭಂಡಾರಗಳನ್ನು ತೆರೆದು ಕಡಿಮೆ ಬೆಲೆಗೆ ಮೇವು ಪೂರೈಕೆ ಮಾಡಲು ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾದರೇ ಜಮೀನು, ಗೋಮಾಳಗಳಲ್ಲಿ ಚಿಗುರು ಬರಲಿದ್ದು, ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ.