ಜಿಲ್ಲೆಯ ವಿವಿಧ ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಉಪಮುಖ್ಯಮಂತ್ರಿಗಳ ಭೇಟಿ

ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರು ಇಂದು ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ,  ಹನೂರು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರು ಇಂದು ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ, ಹನೂರು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳೆ ಪರಿಶೀಲನೆ ಗ್ರಾಮಸ್ಥರು, ರೈತರಿಂದ ಅಹವಾಲು, ಮನವಿ ಆಲಿಕೆ
  • ಮನವಿ ಸ್ವೀಕಾರ
ಚಾಮರಾಜನಗರ:- ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರು ಇಂದು ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ, ಹನೂರು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ,ಜೆಲ್ಲೆಯ ಶಾಸಕರು,ಇತರೆ ಜನಪ್ರತಿನಿಧಿಗಳು,ಅಧಿಕಾರಿಗಳೊಂದಿಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಉಪಮುಖ್ಯಮಂತ್ರಿಗಳು ಬೆಳೆ ,ಕುಡಿಯುವ ನೀರಿನ ಅಭಾವ ಪರಿಸ್ಥಿತಿ ಯನ್ನು ವೀಕ್ಷಣೆ ಮಾಡಿದರು.
ಗುಂಡ್ಲುಪೇಟೆ ತಾಲೂಕಿನ ಬೇಗೂರಿಗೆ ಆಗಮಿಸುತ್ತಿದ್ದಂತೆ ರೈತ ಮುಖಂಡರಿಂದ ಅಹವಾಲುಗಳನ್ನು ಆಲಿಸಿದರು. ಸೋಮಹಳ್ಳಿ ಗ್ರಾಮದಲ್ಲಿ ಒಣಗಿದ ಸೂರ್ಯಕಾಂತಿ ಬೆಳೆಯನ್ನು ವೀಕ್ಷಣೆ ಮಾಡಿದರು. ಬೆಳೆ ಬೆಳೆದ ರೈತರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿಗಳು ಬೆಳೆಗಾಗಿ ಎಷ್ಟು ವೆಚ್ಚವಾಗಿದೆ? ಬೆಳೆ ಬೆಳೆಯಲು ಸಾಲ ತೆಗೆದುಕೊಂಡಿದ್ದೀರ? ಜಾನುವಾರುಗಳು ಇವೆಯೇ ಎಂದು ಪ್ರಶ್ನಿಸಿದರು. ಇದೇ ವೇಳೆ ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳಿಂದಲೂ ಸಹ ಮಾಹಿತಿ ಪಡೆದರು. ಪ್ರತಿ ಗ್ರಾಮ ಪಂಚಾಯಿತಿವಾರು ಮೇವು ವಿತರಣೆಯಾಗಬೇಕು. ಈ ಭಾಗದಲ್ಲಿ ನೀರಾವರಿ ಸೌಲಭ್ಯವಿಲ್ಲ. ಹೀಗಾಗಿ ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಮರಳಾಪುರ-ಬೊಗ್ಗನಪುರದಲ್ಲಿ ಒಣಗಿ ಹೋಗಿದ್ದ ಹತ್ತಿ, ಚೆಂಡು ಹೂವು ಬೆಳೆಯನ್ನು ಪರಿಶೀಲಿಸಿದರು. ಅಲ್ಲಿಯೂ ಸಹ ಜಮೀನಿನ ರೈತರೊಂದಿಗೆ ಮಾತನಾಡಿ ಎಷ್ಟು ಪ್ರಮಾಣದಲ್ಲಿ ಬೆಳೆಗಾಗಿ ವೆಚ್ಚ ಮಾಡಿದ್ದೀರಿ ಎಂದು ಪ್ರಶ್ನಿಸಿ, ಕುಟುಂಬದ ಮಾಹಿತಿ ಪಡೆದ ಉಪಮುಖ್ಯಮಂತ್ರಿಗಳು ಸೂಕ್ತ ಕ್ರಮ ವಹಿಸಲಿದ್ದೇವೆ ಎಂದರು.
ನಿಟ್ರೆ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾರ್ಮಿಕರು ನಿರ್ವಹಿಸುತ್ತಿದ್ದ ಕೆರೆ ಕಾಮಗಾರಿ ವೀಕ್ಷಣೆ ಮಾಡಿದರು. ಇದೇ ವೇಳೆ ಕೂಲಿ ಕಾರ್ಮಿಕರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿಗಳು ನಿಮಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಸೌಲಭ್ಯ ತಲುಪುತ್ತಿದ್ದೆಯೇ ಎಂದು ಕೇಳಿದರು. ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ನಿಗದಿತ ಅವಧಿಯೊಳಗೆ ಕೂಲಿ ಹಣ ಪಾವತಿಸಲು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಸೂಚಿಸಿದರು.
ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದಲ್ಲಿ ಒಣಗಿದ ಕಬ್ಬು, ಜೋಳ ಬೆಳೆಯನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಕಬ್ಬು ಬೆಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸುವ ನಿಟ್ಟಿನಲ್ಲಿ ಗಮನಹರಿಸುವುದಾಗಿ ತಿಳಿಸಿದರು. ಮುಕ್ಕಡಹಳ್ಳಿಯಲ್ಲಿ ಗ್ರಾಮದಲ್ಲಿ ರೈತ ಮುಖಂಡರಿಂದ ಮನವಿ ಸ್ವೀಕರಿಸಿದರು. ಹೆಗ್ಗೋಠಾರ ಗ್ರಾಮದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿಗೆ ತೊಂದರೆಯಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಮೂಲಕ ತಮ್ಮ ನೆರವಿಗೆ ಬರಬೇಕೆಂದು ಗ್ರಾಮಸ್ಥರು, ರೈತರು ಮನವಿ ಮಾಡಿದರು.
ಹನೂರು ತಾಲೂಕಿನ ಅಜ್ಜೀಪುರ ಗ್ರಾಮಕ್ಕೆ ಭೇಟಿ ನೀಡಿ ಒಳಗಿದ ಬೆಳೆಗಳನ್ನು ಉಪಮುಖ್ಯಮಂತ್ರಿಗಳು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ರೈತ ಮುಖಂಡರು ಮಾತನಾಡಿ ಈ ಭಾಗದಲ್ಲಿ ನೀರಿಲ್ಲದೆ ಈರುಳ್ಳಿ, ಬಾಳೆ, ಬೆಳ್ಳುಳ್ಳಿ ಸೇರಿದಂತೆ ನಾನಾ ಬೆಳೆಗಳು ನಷ್ಟವಾಗಿದೆ. ತಮ್ಮ ಮನವಿಗೆ ಸ್ಪಂದಿಸಿ ಸೂಕ್ತ ನೆರವು ನೀಡಬೇಕು. ಉಡುತೊರೆಹಳ್ಳಕ್ಕೆ ನೀರು ತುಂಬಿಸಬೇಕು. ಹೂಳೆತ್ತಿಸಿ ನಮ್ಮ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಗ್ರಾಮಸ್ಥರ ಅಹವಾಲು ಆಲಿಸಿದ ವೇಳೆ ಕುಡಿಯುವ ನೀರಿಗೆ ಜನರು ಮನವಿ ಮಾಡಿದರು. ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಕುರಿತು ಉಪಮುಖ್ಯಮಂತ್ರಿಗಳು ಮಾಹಿತಿ ಪಡೆದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಹೆಚ್.ಎಂ. ಗಣೇಶ್ ಪ್ರಸಾದ್, ಎಂ.ಆರ್. ಮಂಜುನಾಥ್, ದರ್ಶನ್ ದ್ರುವನಾರಾಯಣ ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಇತರೆ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net