ಚಾ.ನಗರ ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ

ಪಟ್ಟಣದ ತಾಲೂಕು ಕಚೇರಿ ಮುಂಭಾಗ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ರೈತರು ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್ ಬಸವರಾಜು, ಹನೂರು ತಹಸೀಲ್ದಾರ್ ಚೈತ್ರಾ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ರೈತರು ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್ ಬಸವರಾಜು, ಹನೂರು ತಹಸೀಲ್ದಾರ್ ಚೈತ್ರಾ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘ ಕಾರ್ಯಕರ್ತರಿಂದ ಪ್ರತಿಭಟನೆ
  • ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ
ಕೊಳ್ಳೇಗಾಲ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಪಟ್ಟಣದಲ್ಲಿ ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ತಾಲೂಕು ಕಚೇರಿ ಮುಂಭಾಗ ಜಮಾಯಿಸಿ ಘೋಷಣೆಗಳನ್ನು ಕೂಗಿದರು.
ಈ ವೇಳೆ ರೈತ ಮುಖಂಡ ಶೈಲೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಅಭಾವದಿಂದ ಅಂತರ್ಜಲ ಕುಸಿದಿದೆ. ಭಾಗಶಃ ಕೃಷಿ ಚಟುವಟಿಕೆ ಕಡಿಮೆಯಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವುದಕ್ಕೂ ಸಹ ನೀರಿಲ್ಲ. ಹಾಗಾಗಿ ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಅಭಿವೃದ್ಧಿ ಹೆಸರಲ್ಲಿ ಹಣ ದೋಚಲು ಕೊಳ್ಳೇಗಾಲ ವ್ಯಾಪ್ತಿಯ ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದನ್ನು ಸ್ಥಗಿತಗೊಳಿಸಿ ಕೆರೆ ತುಂಬಿಸಬೇಕು. ವಿಷಪೂರಿತ ಹಾವು ಕಡಿದು ರೈತ ಮೃತಪಟ್ಟರೆ ಬಿಕ್ಷೆ ನೀಡುವಂತೆ 2 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ರೈತ, ಕಾರ್ಮಿಕ ಹಾವು ಕಚ್ಚಿ ಸತ್ತರೆ 15 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸತ್ತೇಗಾಲ ಗ್ರಾ.ಪಂ ವ್ಯಾಪ್ತಿಯ ಸ.ನಂ 174 ರಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದು, ಕಳೆದ 2023ರಲ್ಲಿ ಜಂಟಿ ಸರ್ವೇ ಆಗಿದೆ. ಇದರ ವರದಿಯು ರಾಜ್ಯ ಸರ್ಕಾರಕ್ಕೆ ತಲುಪಿ 3 ವರ್ಷವಾದರೂ ಸಾಗುವಳಿ ಚೀಟಿ ನೀಡಿಲ್ಲ. ಗೋಪಿನಾಥಂ ಗ್ರಾ.ಪಂ ವ್ಯಾಪ್ತಿಯ ಆಲಂಬಾಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅರಣ್ಯ ಪ್ರದೇಶದಲ್ಲಿ ರೈತರು ಸಾಗುವಳಿ ನಡೆಸುತ್ತಿದ್ದು, ಸಾಗುವಳಿ ಚೀಟಿ ನೀಡಬೇಕು. ಹನೂರು ಕ್ಷೇತ್ರ ಸಾರಿಗೆ ಮತ್ತು ನೀರಿನ ಸಮಸ್ಯೆ ಬಗೆಹರಿಸಬೇಕು. ಕೊಳ್ಳೇಗಾಲದ ಜಕ್ಕಳಿಯ ಕೋಟೆಕೆರೆ ಮತ್ತು ಹಂಪಾಪುರ ಕೆರೆಗೆ ನದಿ ಮೂಲದಿಂದ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಸತ್ತೇಗಾಲ, ದಾಸನಪುರ ಬೈಪಾಸ್ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಬೇಕು. ಕೆಶಿಪ್ ರಸ್ತೆ ವ್ಯಾಪ್ತಿಯ ದೊಡ್ಡಿಂದುವಾಡಿ ವೃತ್ತದಲ್ಲಿ ಮೇಲ್ಸೇತುವೆ ಆಗಬೇಕು. ಇದರಿಂದ ಹೆಚ್ಚಾಗುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಯಬಹುದಾಗಿದೆ. ಮಂದಗತಿಯಲ್ಲಿ ಸಾಗುತ್ತಿರುವ ಚಿಕ್ಕಲ್ಲೂರು ರಸ್ತೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಮಾರ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಪಣ ಕೋಬೆ ಅರಣ್ಯ ಪ್ರದೇಶದಲ್ಲಿ ಜಲಾಶಯ ನಿರ್ಮಾಣ ಮಾಡ ಬೇಕು. ಸಹಕಾರ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದಿರುವ ರೈತರಿಂದ ಫಸಲ್ ಭೀಮಾ ಯೋಜನೆಯನ್ನು ಕಟ್ಟಿಸಿಕೊಳ್ಳುದಂತೆ ನೀಡಿರುವ ಆದೇಶವನ್ನು ಮರು ಪರಿಶೀಲಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಬಸವರಾಜು, ಹನೂರು ತಹಸೀಲ್ದಾರ್ ಚೈತ್ರಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಬಳಿಕ ಪರಿಶೀಲಿಸಿ ಕ್ರಮವಹಿಸುವಂತೆ ತಿಳಿಸಿದರು. ಆನಂತರ ಪ್ರತಿಭಟನೆ ಕೈಬಿಟ್ಟರು.
ರೈತ ಮುಖಂಡರಾದ ಬಸವರಾಜು, ಪೆರಿಯಾ, ವಸಂತ, ರವಿ, ಬಸವಣ್ಣ, ಜೋಸೆಫ್, ರಾಜಣ್ಣ, ಅಂತೋಣಿ ಸ್ವಾಮಿ, ಗುಣ, ಮುರುಗನ್, ಅರ್ಪುದ, ಸಂದನ ಮೇರಿ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net