ಈ ವೇಳೆ ಪಡಿತರ ಚೀಟಿದಾರರು ಮಾತನಾಡಿ, ಈ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು ಪಡಿತರವನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ. ತಿಂಗಳ ಕೊನೆಯಲ್ಲಿ 5 ದಿನ ಮಾತ್ರ ಪಡಿತರವನ್ನು ವಿತರಿಸಲಾಗುತ್ತಿದೆ. ಇದರಿಂದ ಕೂಲಿ ಕೆಲಸವನ್ನು ಬಿಟ್ಟು ಪಡಿತರ ಪಡೆಯಲು ಆಗಮಿಸಿದರೂ ರಾಮಚಂದ್ರ ಅವರು ನೆಟ್‌ವರ್ಕ್ ಸಮಸ್ಯೆಯ ನೆಪವೊಡ್ಡಿ ಅಲೆದಾಡಿಸುತ್ತಾರೆ. ಜನರ ಜತೆ ಅನುಚಿತವಾಗಿ ವರ್ತಿಸುತ್ತಾರೆ. ಅಂತ್ಯೋದಯ ಕಾರ್ಡ್‌ದಾರರಿಗೆ ನೀಡಲಾಗುವ ಪಡಿತರದಲ್ಲಿ ವಂಚಿಸಲಾಗುತ್ತಿದೆ. ಸೀಮೆಎಣ್ಣೆಯಂತೂ ವಿತರಿಸುವುದೆ ಇಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಇಲ್ಲಸಲ್ಲದ ಕಾರಣ ನೀಡುತ್ತಾರೆ. ಈಗಿರುವಾಗ ಈ ಬಾರಿ ಕೆಲವರಿಗೆ 2 ತಿಂಗಳ ಪಡಿತರವನ್ನು ವಿತರಿಸಿ ಉಳಿದವರಿಗೆ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ? ಹಾಗಾಗಿ ಈ ಅಂಗಡಿಯಲ್ಲಿ ಪ್ರತಿ ತಿಂಗಳು ಪಡಿತರ ವಿತರಣೆಯದ್ದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಈ ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸಿ ಹೊಸ ನ್ಯಾಯಬೆಲೆ ಅಂಗಡಿಯನ್ನು ತೆರೆದು ಸಮರ್ಪಕ ಪಡಿತರ ವಿತರಿಸುವಂತಾಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.