ಬಸ್ ಪ್ರಯಾಣ ದರ ಏರಿಕೆಗೆ ಖಂಡನೆ

ಎಸ್‌ಡಿಪಿಐ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ
SDPI Protest
ರಾಜ್ಯ ಸರ್ಕಾರವು ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ವತಿಯಿಂದ ಚಾಮರಾಜನಗರದ ಸಾರಿಗೆ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಲಾಯಿತು. ಕೆಎಸ್‌ಆರ್‌ಟಿಸಿ ಬಸ್
Published on: 

ಚಾಮರಾಜನಗರ: ರಾಜ್ಯ ಸರ್ಕಾರವು ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ವತಿಯಿಂದ ನಗರದ ಸಾರಿಗೆ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಲಾಯಿತು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದೆ ಧರಣಿ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದ ಸರ್ಕಾರ, ಇದೀಗ ಆರ್ಥಿಕ ಸಂಕಷ್ಟದ ನೆಪವೊಡ್ಡಿ ಡೀಸೆಲ್ ಖರೀದಿ, ನೌಕರರ ವೇತನ ಮತ್ತು ಪಿಂಚಣಿ ಪಾವತಿಗೂ ಹಣವಿಲ್ಲ ಎಂಬ ಪರಿಸ್ಥಿತಿ ಸೃಷ್ಟಿಸಿಕೊಂಡಿದೆ. ಇದರ ಪರಿಣಾಮವಾಗಿ ಬಸ್ ಪ್ರಯಾಣ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಹಾಕುತ್ತಿದೆ ಎಂದು ದೂರಿದರು.

ಒಂದೆಡೆ ನಂದಿನಿ ಹಾಲು, ಮೊಸರಿನ ದರ ಏರಿಕೆ ಮಾಡಲಾಗಿದ್ದು, ಮತ್ತೊಂದೆಡೆ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಿಸಲಾಗಿದೆ. ಇದರಿಂದ ಪ್ರತಿನಿತ್ಯ ಬಸ್‌ಗಳನ್ನು ಅವಲಂಬಿಸಿರುವ ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆ ಮತ್ತಷ್ಟು ಕಷ್ಟಕರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ನಿರ್ಧಾರ ಹಿಂಪಡೆಯಬೇಕು. ಹಾಲು, ಮೊಸರು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರಿಗೆ ಉಂಟಾಗುತ್ತಿರುವ ಹೊರೆ ಕಡಿಮೆ ಮಾಡಬೇಕು. ಬೆಲೆ ಏರಿಕೆಯ ನೆಪದಲ್ಲಿ ಕಾಳಸಂತೆ ಹಾಗೂ ಕೃತಕ ಅಭಾವಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಸ್‌ಡಿಪಿಐನ ಅಬ್ರಾರ್ ಅಹಮ್ಮದ್, ಜಬೀಉಲ್ಲಾ, ಇರ್ಫಾನ್, ಕಲೀಲ್ ಉಲ್ಲಾ, ಅಮೀಕ್ ಇತರರು ಇದ್ದರು.