ಯಳಂದೂರು : ಪಟ್ಟಣದಲ್ಲಿರುವ ಬಹುತೇಕ ನೀರಿನ ತೊಂಬೆಗಳು ಅನೈರ್ಮಲ್ಯದಿಂದ ಕೂಡಿದ್ದು, ಸುತ್ತಲೂ ಅಶುಚಿತ್ವ ಮನೆ ಮಾಡಿದೆ.
ಪಟ್ಟಣದಲ್ಲಿ ಬಹುತೇಕ ಕಡೆ ನೀರಿನ ತೊಂಬೆಗಳಿದ್ದರೂ ಕೂಡ ಇಲ್ಲಿ ಕೆಲವು ತೊಂಬೆಗಳಿಗೆ ಸಂಪರ್ಕವೇ ಕಲ್ಪಿಸಿಲ್ಲ. ಇರುವ ಏಳೆಂಟು ತೊಂಬೆಗಳಲ್ಲಿ ನೀರು ಶೇಖರಣೆ ಮಾಡಲಾಗುತ್ತದೆ. ಆದರೆ ಇದು ಅಶುಚಿತ್ವದಿಂದ ಕೂಡಿದೆ. ಇಲ್ಲಿನ ನೀರು ಕುಡಿಯಲು ಅಥವಾ ಬೇರೆ ಕೆಲಸಗಳಿಗೆ ಉಪಯೋಗಿಸಲು ಯೋಗ್ಯವಾಗಿಲ್ಲ. ಪಟ್ಟಣದಲ್ಲಿ ಇದಕ್ಕೆ ನೀರನ್ನು ಬಹುತೇಕ ಕೊಳವೆ ಬಾವಿಗಳಿಂದಲೇ ತುಂಬಿಸಲಾಗುತ್ತದೆ. ಈ ನೀರು ಗಡುಸಾಗಿರುವುದರಿಂದ ಇಲ್ಲಿನ ನೀರಿನ ತೊಂಬೆಗಳು ಬೇಗ ಪಾಚಿ ಕಟ್ಟುತ್ತದೆ. ಈಗ ಬೇಸಿಗೆ ಬರುತ್ತಿದೆ. ಈ ನೀರನ್ನು ಕೆಲವರು ಕುಡಿಯಲೂ ಕೂಡ ಬಳಸುತ್ತಾರೆ. ಜಾನುವಾರುಗಳಿಗೆ ಕುಡಿಯಲು ಬಳಕೆ ಮಾಡಲಾಗುತ್ತದೆ. ಹಾಗಾಗಿ ಇದರಲ್ಲಿ ವಿಷಕಾರಿ ಅಂಶಗಳು ದೇಹ ಹೊಕ್ಕಿ ರೋಗ ರುಜಿನಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ.
ಈ ತೊಂಬೆಗಳನ್ನು ಶುಚಿಗೊಳಿಸಿ ಹಲವು ತಿಂಗಳುಗಳೇ ಕಳೆದಿದ್ದು ಕೂಡಲೇ ಇದನ್ನು ಶುಚಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪಟ್ಟಣದ ಮಹದೇವಸ್ವಾಮಿ, ಅನಿಲ್, ಕುಮಾರ, ಸ್ವಾಮಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿರುವ ನೀರಿನ ತೊಂಬೆಗಳನ್ನು ಶುಚಿಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ನಮ್ಮ ಪೌರಕಾರ್ಮಿಕರಿಗೆ ಜಾತ್ರೆ, ಹಬ್ಬ ಸೇರಿದಂತೆ ಬಿಡುವಿಲ್ಲದ ಕಾರಣ ಇದನ್ನು ಶುಚಿಗೊಳಿಸಲು ವಿಳಂಬವಾಗಿದೆ. ಈಗ ಬೇಸಿಗೆ ಬರುತ್ತಿದ್ದು, ಇದನ್ನು ರಾಸಾಯನಿಕಗಳನ್ನು ಬಳಸಿ ಶುಚಿಗೊಳಿಸಲು ಕ್ರಮ ವಹಿಸಲಾಗುವುದು.