ರಾಸಾಯನಿಕಯುಕ್ತ ಆಹಾರದಿಂದ ಕಣ್ಣಿನ ಸಮಸ್ಯೆ

ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಬಸವರಾಜತಳವಾರ್ ಉದ್ಘಾಟಿಸಿದರು. ಶ್ರೀನಾಥ್, ನಾಗೇಂದ್ರ, ವಿಜಯಕಾಂತ್, ಮಹದೇವಸ್ವಾಮಿ, ಸಿದ್ದರಾಜು, ಭೈರೇಶ್ ಇದ್ದರು.
ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಬಸವರಾಜತಳವಾರ್ ಉದ್ಘಾಟಿಸಿದರು. ಶ್ರೀನಾಥ್, ನಾಗೇಂದ್ರ, ವಿಜಯಕಾಂತ್, ಮಹದೇವಸ್ವಾಮಿ, ಸಿದ್ದರಾಜು, ಭೈರೇಶ್ ಇದ್ದರು.
Published on
ಗುಂಡ್ಲುಪೇಟೆ: ಆಧುನಿಕ ಜೀವನಶೈಲಿ ಹಾಗೂ ರಾಸಾಯನಿಕ ಬಳಸಿ ಬೆಳೆದ ಆಹಾರ ಸೇವನೆಯಿಂದ ಇತ್ತೀಚಿನ ದಿನಗಳಲ್ಲಿ ಜನರು ಕಣ್ಣಿನ ತೊಂದರೆಗಳನ್ನು ಎದುರಿಸುವಂತಾಗಿದೆ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರ ಭವನದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ, ಅರವಿಂದ ಕಣ್ಣಿನ ಆಸ್ಪತ್ರೆ ಹಾಗೂ ವಿವಿಧ ಸಂಘ -ಸಂಸ್ಥೆಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ಡಿಜಿಟಲ್‌ಯುಗದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಮೊಬೈಲ್ ಟಿವಿ ಲ್ಯಾಪ್‌ಟಾಪ್ ಬಳಕೆ ಮಾಡುತ್ತಿದ್ದು, ಕಣ್ಣಿನ ಮೇಲೆ ಒತ್ತಡ ಬೀಳುತ್ತಿದೆ. ಇದರಿಂದ ಕಣ್ಣಿನ ಸಮಸ್ಯೆ ಏರಿಕೆಯಾಗುತ್ತಿವೆ ಎಂದರು.
ಸ್ಥಿತಿವಂತರು ಪಟ್ಟಣದ ಆಸ್ಪತ್ರೆಗಳಲ್ಲಿ ಹಣಕೊಟ್ಟು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಗ್ರಾಮೀಣ ಹಾಗೂ ಬಡ ಜನತೆಗೆ ಆರ್ಥಿಕ ಸೌಕರ್ಯ ಇಲ್ಲದ ಕಾರಣ ಕಣ್ಣಿನ ಆರೋಗ್ಯದ ಕಡೆ ಗಮನಹರಿಸಲು ಸಾಧ್ಯವಾಗದೆ ನಿರ್ಲಕ್ಷ್ಯ ವಹಿಸುತ್ತಾರೆ. ಇದರಿಂದಾಗಿ ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸೆಯನ್ನು ಮಾಡಿಸದಿದ್ದರೆ ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಅರವಿಂದ ಕಣ್ಣಿನ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ವಿಜಯಕಾಂತ್ ಮಾತನಾಡಿ, ರೆಟಿನೋಪಟಿ ಹಾಗೂ ಸಕ್ಕರೆ ಕಾಯಿಲೆಯಿಂದ ಜನರಿಗೆ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಹೆಚ್ಚಾಗುತ್ತಿದ್ದು, ಬಡಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು ಬಡ ಜನರ ಪರವಾಗಿ ನಿಂತು ಶಿಬಿರಗಳನ್ನು ಆಯೋಜಿಸಿ ಗ್ರಾಮೀಣ ಭಾಗದ ಬಡ ಜನತೆಯ ಕಣ್ಣಿನ ರಕ್ಷಣೆಗೆ ಮುಂದಾಗುತ್ತಿರುವುದು ಶ್ಲಾಘನೀಯ ಎಂದರು.
ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಚ ನಾಗೇಂದ್ರ, ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಬರಗಿ ಸಿದ್ದರಾಜು, ಶಿಬಿರದ ಆಯೋಜಕ ಎಂ.ಶ್ರೀನಾಥ್, ಅನುಗ್ರಹ ಫೌಂಡೇಷನ್ ಸಂಯೋಜಕ ರಮೇಶ್, ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ಮಹದೇವಸ್ವಾಮಿ, ಜಿಲ್ಲಾ ಸಂಚಾಲಕ ರಾ.ಬಾಬು, ಎಂ.ಮಲ್ಲು, ವೀರಭದ್ರಪ್ಪ, ಭೈರೇಶ್ ,ಪ್ರಸಾದ್, ವೇಣು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net