3 ಸಫಾರಿಯನ್ನು ಬಂದ್ ಮಾಡುವಂತೆ ಹಾಗೂ ನ್ಯಾಯಾಲಯವನ್ನು ಮರು ಆರಂಭಿಸುವಂತೆ ಆಗ್ರಹಿಸಿ ಹನೂರಿನಲ್ಲಿ ರೈತ ಸಂಘದಿಂದ ಪ್ರತಿಭಟನೆ ನಡೆಯಿತು. ಗೌಡೇಗೌಡ, ಅಮ್ಜಾದ್‌ಖಾನ್, ಪಳನಿಸ್ವಾಮಿ, ವೆಂಕಟಾಚಲ, ಶಾಂತಿ ಇತರರು ಇದ್ದರು.
ಹನೂರು: ಸಫಾರಿಯನ್ನು ಬಂದ್ ಮಾಡುವುದರ ಮೂಲಕ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಂತೆ ಹಾಗೂ ಹನೂರಿನಲ್ಲಿದ್ದ ನ್ಯಾಯಾಲಯವನ್ನು ಮರು ಆರಂಭಿಸುವಂತೆ ಒತ್ತಾಯಿಸಿ ಬುಧವಾರ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ಅಜ್ಜೀಪುರ ಎಲ್ಲೇಮಾಳ ವಿಭಜಕ ರಸ್ತೆಯ ಬಳಿ ನೆರೆದಿದ್ದ ನೂರಾರು ರೈತರು, ಅರಣ್ಯ ಇಲಾಖೆಯ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಮುಖ್ಯರಸ್ತೆಯ ಮೂಲಕ ತೆರಳಿ ತಹಸೀಲ್ದಾರ್ ಕಚೇರಿ ಮುಂಭಾಗ ಜಮಾಯಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಈ ಹಿಂದೆ ಈ ಭಾಗದಲ್ಲಿ ಸಫಾರಿ ಇರಲಿಲ್ಲ. ಇದರಿಂದ ಕಾಡು ಪ್ರಾಣಿಗಳಿಂದ ಸಮಸ್ಯೆ ಇರಲಿಲ್ಲ. ಆದರೀಗ ಸಫಾರಿ ಆರಂಭಿಸಿರುವುದರಿಂದ ಕಾಡು ಪ್ರಾಣಿಗಳು ಜಮೀನುಗಳಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ನಾಗರಹೊಳೆ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಫಾರಿ ಬಂದ್ ಮಾಡಿಸಿದ್ದು, ಇದೀಗ ಕಾಡು ಪ್ರಾಣಿಗಳ ಹಾವಳಿ ತಪ್ಪಿದೆ. ಆದ್ದರಿಂದ ಈ ಭಾಗದಲ್ಲೂ ಸಫಾರಿಯನ್ನು ಬಂದ್ ಮಾಡಬೇಕು ಎಂದರು.
ಹನೂರು ತಾಲೂಕು ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣ ಹೊಂದಿದ್ದು, ಕಾಡಂಚಿನ ಗ್ರಾಮಗಳೇ ಹೆಚ್ಚಾಗಿದೆ. ತಾಲೂಕು ಕೇಂದ್ರ ಹನೂರಿನಲ್ಲಿ ನ್ಯಾಯಾಲಯವನ್ನು ತೆರೆಯಲಾಗಿತ್ತು. ಇದರಿಂದ ಜನರಿಗೆ ಅನುಕೂಲವಾಗಿತ್ತು. ಆದರೆ ಇದೀಗ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಾಲಯವನ್ನು ಕೊಳ್ಳೇಗಾಲಕ್ಕೆ ಸ್ಥಳಾಂತರಿಸಿರುವುದರಿಂದ ಈ ಭಾಗದ ಜನರು ಕೊಳ್ಳೇಗಾಲಕ್ಕೆ ಅಲೆಯುವಂತಾಗಿದೆ. ಆದ್ದರಿಂದ ಹನೂರಿನಲ್ಲಿ ನ್ಯಾಯಾಲಯ ಮರು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿ, ಅಜ್ಜೀಪುರದಲ್ಲಿ ಸಫಾರಿಯನ್ನು ಆರಂಭಿಸಿರುವುದರಿಂದ ಕಳೆದ ಒಂದು ವರ್ಷದಿಂದ ಚಿರತೆ ಗ್ರಾಮದ ಜಮೀನುಗಳ ಕೊಟ್ಟಿಗೆಗಳಿಗೆ ಲಗ್ಗೆ ಇಟ್ಟು ಮೇಕೆಗಳನ್ನು ಬಲಿ ಪಡೆಯುತ್ತಿದೆ. ಕಳೆದ ತಿಂಗಳು ಗ್ರಾಮಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಸೆರೆ ಹಿಡಿಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ದಿಗ್ಬಂಧನ ವಿಧಿಸಲಾಗಿತ್ತು. ಈ ವೇಳೆ ಆಗಮಿಸಿದ್ದ ಎಸಿಎಫ್ ಉಮಾಪತಿ ಅವರು 15 ದಿನದೊಳಗೆ ಚಿರತೆ ಸೆರೆ ಹಿಡಿಯುವುದಾಗಿ ಭರವಸೆ ನೀಡಿದ್ದರು. ಆದರೆ ಈ ಕಾರ್ಯವಾಗಿಲ್ಲ. ಆದ್ದರಿಂದ ಚಿರತೆ ಸೆರೆ ಹಿಡಿಯಬೇಕು. ಜತೆಗೆ ಸಫಾರಿ ಬಂದ್ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧಿಕಾರಿಗಳಿಗೆ ತರಾಟೆ: ಪ್ರತಿಭಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಕಾರರು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಬಳಿಕ ಸ್ಥಳಕ್ಕಾಗಮಿಸಿದ ಮಲೆಮಹದೇಶ್ವರ ವನ್ಯಜೀವಿ ವಲಯದ ಎಸಿಎಫ್ ವಿರಾಜ್ ಹೊಸೂರ್ ಅವರು ಸಮಸ್ಯೆ ಆಲಿಸಿದರು. ಈ ವೇಳೆ ಅವರನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡರು.
ಬಳಿಕ ಮನವಿಯನ್ನು ಸ್ವೀಕರಿಸಿದ ವಿರಾಜ್ ಹೊಸೂರ್ ಅವರು ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ಸಂಬಂಧ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ನ್ಯಾಯಾಲಯ ಪುನರಾರಂಭಿಸುವ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.
ರೈತ ಸಂಘದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರಾಜಮಣಿ, ಗ್ರಾಮ ಘಟಕದ ಅಧ್ಯಕ್ಷ ಪಳನಿಸ್ವಾಮಿ, ರೈತ ಮುಖಂಡರಾದ ಕೂಡಲೂರು ವೆಂಕಟಾಚಲ, ಗೋವಿಂದರಾಜು, ಶಾಂತಿ, ಮಾದೇವಿ, ಸಬರಿಯಮ್ಮ, ಪಾಪಮ್ಮ, ಸುಂದರಿ ಇತರರಿದ್ದರು.