ಟ್ರಾನ್ಸ್‌ಫಾರ್ಮರ್ ಅಳವಡಿಸಲು ಹಣಕ್ಕೆ ಬೇಡಿಕೆ

ಹನೂರಿನ ಸೆಸ್ಕ್ ಉಪ ವಿಭಾಗೀಯ ಕಚೇರಿ ಆವರಣದಲ್ಲಿ ಇಇ ತಬಸ್ಸುಮ್ ಬಾನು ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ನಡೆಯಿತು. ರಂಗಸ್ವಾಮಿ, ಕರಿಯಪ್ಪ, ಮಾದಪ್ಪ, ಪ್ರಸಾದ್ ಇದ್ದರು.
ಹನೂರಿನ ಸೆಸ್ಕ್ ಉಪ ವಿಭಾಗೀಯ ಕಚೇರಿ ಆವರಣದಲ್ಲಿ ಇಇ ತಬಸ್ಸುಮ್ ಬಾನು ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ನಡೆಯಿತು. ರಂಗಸ್ವಾಮಿ, ಕರಿಯಪ್ಪ, ಮಾದಪ್ಪ, ಪ್ರಸಾದ್ ಇದ್ದರು.
Published on
ಹನೂರು: ಹಗಲಿನ ವೇಳೆಯಲ್ಲೂ ಕಂಬಗಳಲ್ಲಿ ವಿದ್ಯುತ್ ದೀಪ ಉರಿಯುತ್ತಿದೆ. ಲೊಕ್ಕನಹಳ್ಳಿ ಮಾರ್ಗದಲ್ಲಿ ವಿದ್ಯುತ್ ಕಂಬಗಳು ಬಾಗಿವೆ. ಕುರಟ್ಟಿ ಹೊಸೂರು ಶಾಲೆಯ ಬಳಿ ವಿದ್ಯುತ್ ತಂತಿ ಜೋತು ಬಿದ್ದಿದೆ. ಮ.ಬೆಟ್ಟದ ತಪ್ಪಲಿನ ಕಾಡಂಚಿನ ಗ್ರಾಮಗಳಲ್ಲಿ ವಿದ್ಯುತ್ ಯೋಜನೆ ನನೆಗುದಿಗೆ ಬಿದ್ದಿದೆ. ಲೊಕ್ಕನಹಳ್ಳಿ ಜೆಇ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಹಣ ಪಡೆಯುತ್ತಿದ್ದಾರೆ...
ಇದು ಪಟ್ಟಣದ ಸೆಸ್ಕ್ ಉಪವಿಭಾಗೀಯ ಕಚೇರಿ ಆವರಣದಲ್ಲಿ ಶುಕ್ರವಾರ ವಿದ್ಯುತ್ ಕುಂದುಕೊರತೆ ಸಂಬಂಧ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ರೈತರಿಂದ ಕೇಳಿ ಬಂದ ದೂರುಗಳು. ಸಭೆಯಲ್ಲಿ ರೈತ ಸಂಘದ ಚಂಗಡಿ ಕರಿಯಪ್ಪ ಮಾತನಾಡಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹಗಲಿನ ವೇಳೆಯಲ್ಲೂ ವಿದ್ಯುತ್ ದೀಪ ಉರಿಯುತ್ತಿದ್ದು, ವ್ಯರ್ಥವಾಗುತ್ತಿದೆ. ಆದ್ದರಿಂದ ಈ ಬಗ್ಗೆ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಇದಕ್ಕೆ ಕಡಿವಾಣ ಹಾಕಬೇಕು. ಎಂ.ಜಿ.ದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಹನೂರಿನ ಮುತ್ತುಸ್ವಾಮಿ ನಾಯ್ಡು ಮಾತನಾಡಿ, ಹನೂರಿನಿಂದ ಲೊಕ್ಕನಹಳ್ಳಿಗೆ ತೆರಳುವ ಮಾರ್ಗದಲ್ಲಿ ವಿದ್ಯುತ್ ಕಂಬಗಳು ಬಾಗಿವೆ. ಇದರಿಂದ ಭಯದ ನಡುವೆ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು. ಕುರಟ್ಟಿ ಗ್ರಾಮದ ಪುಟ್ಟಸ್ವಾಮಿ ,ಅಗ್ರಾಮದ ಶಾಲೆಯ ಬಳಿ ವಿದ್ಯುತ್ ತಂತಿ ಜೋತು ಬಿದ್ದಿದೆ. ಆದ್ದರಿಂದ ಈ ಬಗ್ಗೆ ಕ್ರಮವಾಗಬೇಕು ಎಂದು ಮನವಿ ಮಾಡಿದರು. ಈ ವೇಳೆ ಎಇಇ ರಂಗಸ್ವಾಮಿ ಅವರು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೂಡಲೇ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಜೆಇ ಹಣ ಪಡೆಯುತ್ತಾರೆ:
ಲೊಕ್ಕನಹಳ್ಳಿ ಗ್ರಾಮದ ಮನೋಹರ್ ಮಾತನಾಡಿ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಳವಡಿಸುವ ಟಿಸಿಗೆ ಜೆಇ ಅವರು ರೈತರಿಂದ ಒತ್ತಾಯ ಪೂರ್ವಕವಾಗಿ 4 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಆದ್ದರಿಂದ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಇಇ ತಬಸ್ಸುಮ್ ಬಾನು ಅವರು ಲಿಖಿತವಾಗಿ ದೂರು ನೀಡಿದರೆ ಪರಿಶೀಲಿಸಿ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಅನುಮತಿ ಸಿಗುವ ಭರವಸೆ ಇದೆ
ಮ.ಬೆಟ್ಟ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಇಇ ತಬಸ್ಸುಮ್ ಬಾನು ಮಾತನಾಡಿ, ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಈಗಾಗಲೇ ಕಾಮಗಾರಿ ಕೈಗೊಳ್ಳಲಾಗಿದೆ. ಕೆಲವು ಗ್ರಾಮಗಳಲ್ಲಿ ಪೂರ್ಣಗೊಂಡಿದೆ. ಇನ್ನು ಕೆಲವು ಗ್ರಾಮಗಳಲ್ಲಿ ಕಾಮಗಾರಿ ಆರಂಭಿಸುವಲ್ಲಿ ಅರಣ್ಯ ಇಲಾಖೆಯಿಂದ ತಡೆ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅರಣ್ಯ ಇಲಾಖೆಗೆ ಅಗತ್ಯ ದಾಖಲೆ ಒದಗಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅವರು ಅಗತ್ಯ ಮುತುವರ್ಜಿ ವಹಿಸಿದ್ದು, ಅರಣ್ಯ ಇಲಾಖೆಯಿಂದ ಅನುಮತಿ ಸಿಗುವ ಭರವಸೆ ಇದೆ ಎಂದು ತಿಳಿಸಿದರು.
ಸೋಲಾರ್ ಪ್ರಯೋಜನ ಪಡೆಯಿರಿ
ರಾಜ್ಯದಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಂಎನ್‌ಆರ್‌ಇ ಹಾಗೂ ಕೆಆರ್‌ಇಡಿಎಲ್ ಸಂಸ್ಥೆ ಸಹಯೋಗದಲ್ಲಿ ಪಿಎಂ ಕುಸುಮ್ ಬಿ ಯೋಜನೆ ಜಾರಿಗೊಳಿಸಿದ್ದು, ಇದರಲ್ಲಿ ಸೋಲಾರ್ ಮೂಲಕ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಬಹುದು. ಕೇಂದ್ರ ಸರ್ಕಾರ ಶೇ.30, ರಾಜ್ಯ ಸರ್ಕಾರ ಶೇ.50 ಸಬ್ಸಿಡಿ ನೀಡಲಿದೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಇಇ ತಿಳಿಸಿದರು. ರೈತ ಮುಖಂಡರಾದ ಪ್ರಸಾದ್, ಮಾದಪ್ಪ, ಅಮೋಘ, ಸೆಸ್ಕ್ ಇಲಾಖೆಯ ಜೆಇಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net