ಕೆರೆಗಳಿಗೆ ನೀರು ತುಂಬಿಸಲು ಆಗ್ರಹ

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಎದುರು ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿ.ಎಸ್.ನಿರಂಜನಕುಮಾರ್, ಮಹದೇವ ಪ್ರಸಾದ್, ಸುರೇಶ್ ಇದ್ದರು.
ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಎದುರು ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿ.ಎಸ್.ನಿರಂಜನಕುಮಾರ್, ಮಹದೇವ ಪ್ರಸಾದ್, ಸುರೇಶ್ ಇದ್ದರು.
Published on
ಗುಂಡ್ಲುಪೇಟೆ: ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು. ಕಾಡುಪ್ರಾಣಿಗಳ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿ ಶನಿವಾರ ಬಿಜೆಪಿಯಿಂದ ಹೆದ್ದಾರಿ ತಡೆದು ತಮಟೆ ಚಳವಳಿ ನಡೆಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷರೂ ಆದ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ಪಟ್ಟಣದ ಮಡಳ್ಳಿ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ಕಾರ್ಯಕರ್ತರು ಸ್ವಲ್ಪ ಹೊತ್ತು ಹೆದ್ದಾರಿ ಸಂಚಾರ ತಡೆ ನಡೆಸಿದರು. ಬಳಿಕ ತಾಲೂಕು ಕಚೇರಿ ಮುಂದೆ ಸಮಾವೇಶಗೊಂಡರು. ಈ ವೇಳೆ ಸಿ.ಎಸ್.ನಿರಂಜನ ಕುಮಾರ್ ಮಾತನಾಡಿ, ತಾಲೂಕಿನ ಹಲವು ಕೆರೆಗಳಿಗೆ ಬಿಜೆಪಿ ಅವಧಿಯಲ್ಲಿ ನೀರು ತುಂಬಿಸಲಾಗಿತ್ತು. ಇದೀಗ ಕೆರೆಗಳಿಗೆ ನೀರು ತುಂಬಿಸದ ಕಾರಣ ಜನ-ಜಾನುವಾರುಗಳಿಗೆ ತೊಂದರೆಯಾಗಿದೆ. ತಾಲೂಕಿನಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರಿದರು.
ಮಡಳ್ಳಿ ಗುಮ್ ಕಲ್ಲುಗುಡ್ಡದಲ್ಲಿ ಅಕ್ರಮ ಸ್ಫೋಟದಿಂದ ಕೂಲಿ ಕಾರ್ಮಿಕರು ಮೃತಪಟ್ಟಿದ್ದ ಪರಿಣಾಮ ಕ್ವಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ರಾಜಾರೋಷವಾಗಿ ಕ್ವಾರಿ ನಡೆಯುತ್ತಿದೆ. ಜಾನುವಾರುಗಳ ಕಳ್ಳ ಸಾಗಣೆ ನಿರಂತರವಾಗಿ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ, ಟಿಪ್ಪರ್ ಹಾವಳಿ ಮಿತಿಮೀರಿದೆ, ಗಾಂಜಾ ಅಫೀಮು ಎಗ್ಗಿಲ್ಲದೆ ನಡೆಯುತ್ತಿದೆ. ತಾಲೂಕಿನಲ್ಲಿ ಗನ್ ಸದ್ದು ಮಾಡುತ್ತಿದೆ. ತಮ್ಮ ಸ್ವಂತದ ಕ್ರಷರ್, ಕ್ವಾರಿಗಳಿಗಾಗಿ ದಲಿತರ ಜಮೀನಿನನ್ನು ಕಬಳಿಸುವ ಕೆಲಸ ನಡೆದಿದೆ. ಅಧಿಕಾರಿಗಳಿಂದ ಸಾರ್ವಜನಿಕರ ಮೇಲೆ ನಿರಂತರ ದಬ್ಬಾಳಿಕೆ ನಡಿಯುತ್ತಿದ್ದರೂ ಶಾಸಕ ಗಣೇಶ ಪ್ರಸಾದ್ ಕೈಕಟ್ಟಿ ಕುಳಿತಿದ್ದಾರೆ. ಕೂಡಲೇ ಕೆರೆಗಳಿಗೆ ನೀರು ತುಂಬಿಸಬೇಕು, ತಾಲೂಕಿನಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ, ಪುರಸಭಾ ಮಾಜಿ ಅಧ್ಯಕ್ಷ ಎಲ್.ಸುರೇಶ್, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ಆರ್.ಲೋಕೇಶ್, ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವ ಪ್ರಸಾದ್, ಅರಕಲವಾಡಿ ನಾಗೇಂದ್ರ, ಪ್ರಣಯ್, ಮಹದೇವಶೆಟ್ಟಿ, ಬಸವರಾಜು, ನಾಗೇಶ್, ಡಾ.ನವೀನ್ ಮೌರ್ಯ, ಮಾಡ್ರಳ್ಳಿ ನಾಗೇಂದ್ರ, ಮಲ್ಲೇಶ್, ಮಹೇಂದ್ರ, ಕಬ್ಬಳ್ಳಿ ರೇವಣ್ಣ, ಮಂಜು ಶಿವಪುರ, ಸುನೀಲ್, ಕಬ್ಬಳ್ಳಿ ಮಹೇಶ್, ಪ್ರವೀಣ್, ಬಿಜೆಪಿ ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net