ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದೂರಿನ ಸುರಿಮಳೆ

ಕೊಳ್ಳೇಗಾಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬು ಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಬಸವರಾಜು, ಮೋಹನ್, ಸಿದ್ಧಾರ್ಥ, ಕುಮಾರ್ ಎಚ್. ಎಂ.ಹೇಮಂತ್ ಕುಮಾರ್, ನಟರಾಜ ಮಾಳಿಗೆ ಇದ್ದರು
ಕೊಳ್ಳೇಗಾಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬು ಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಬಸವರಾಜು, ಮೋಹನ್, ಸಿದ್ಧಾರ್ಥ, ಕುಮಾರ್ ಎಚ್. ಎಂ.ಹೇಮಂತ್ ಕುಮಾರ್, ನಟರಾಜ ಮಾಳಿಗೆ ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಕೊಳ್ಳೇಗಾಲದಲ್ಲಿ ಜನರ ಕಷ್ಟಗಳು ಅನಾವರಣ
  • ಶಾಸಕರ ಮುಂದೆ ಅಳಲು ತೋಡಿಕೊಂಡ ಜನರು, ಮುಖಂಡರು
  • ತೊಂದರೆಗಳ ಪರಿಹಾರಕ್ಕೆ ಪಟ್ಟು
ಕೊಳ್ಳೇಗಾಲ: ಕಾರ್ಮಿಕ ಕಾಯ್ದೆ ಉಲ್ಲಂಘನೆ, ಅಕ್ರಮವಾಗಿ ಮದ್ಯ ಮಾರಾಟ, ಗಾಂಜಾ ಹಾವಳಿ, ಕೆರೆ ಒತ್ತುವರಿ, ಪ್ರತಿಷ್ಠಿತ ಶಾಲೆಗಳಲ್ಲಿ ಸಿಗದ ದಾಖಲಾತಿ, ಸ್ಮಶಾನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಜನರು ದೂರಿನ ಸುರಿಮಳೆ ಸುರಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆ ಅನಾವರಣಗೊಳಿಸಿದರು.
ಪ್ರಗತಿಪರ ಒಕ್ಕೂಟದ ತಾಲೂಕು ಸಂಚಾಲಕ ದಿಲೀಪ್ ಸಿದ್ದಪ್ಪಾಜಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಪೋಕ್ಸೋ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಕಾರಣರಾದ ವಾರ್ಡನ್, ಅಡುಗೆ ಸಹಾಯಕರ ವಿರುದ್ಧ ಕ್ರಮ ಆಗಬೇಕು. ಹಾಸ್ಟೆಲ್‌ನಲ್ಲಿ ಸಿಬ್ಬಂದಿ ವರ್ಗ ಗಲಾಟೆ ಮಾಡಿಕೊಂಡಿರುವ ಬಗ್ಗೆ ಗುರುಮೂರ್ತಿ ಪ್ರಜಾಸೇವೆ ಕಾರ್ಯಕ್ರಮದಲ್ಲಿ ದೂರಿದ್ದರು. ಈ ಬಗ್ಗೆ ಏನು ಕ್ರಮ ವಹಿಸಿದ್ದೀರಿ ಎಂದು ಪ್ರಶ್ನಿಸಿದರು.
ಅಲ್ಲದೆ, ವಸತಿ ನಿಲಯದಲ್ಲಿ ಕೆಲಸ ಮಾಡುವ ಅಡುಗೆ ಸಹಾಯಕರನ್ನು ಅನಧಿಕೃತವಾಗಿ ಉಪವಿಭಾಗಾಧಿಕಾರಿ ವಸತಿ ಗೃಹದಲ್ಲಿ ಜೀತದಾಳು ರೂಪದಲ್ಲಿ ದುಡಿಸಲಾಗುತ್ತಿದೆ ಎಂದ ಆರೋಪ ಮಾಡಿದರು. ಇದಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ಹಾಸ್ಟೆಲ್‌ನಲ್ಲಿ ಗಲಾಟೆ ಆಗಿರುವ ಬಗ್ಗೆ ಪೊಲೀಸರು ಪರಿಶೀಲಿಸಿ ಕ್ರಮವಹಿಸಿ ಎಂದು ಸೂಚನೆ ನೀಡಿದರು.
ದಸಂಸ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಎಸ್.ನಿಂಗರಾಜು ಮಾತನಾಡಿ, ಒಳ ಮೀಸಲಾತಿ ಬಳಿಕ ಜಾತಿ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆಯಲ್ಲಿ ಬಹಳ ಗೊಂದಲವಾಗಿದೆ. ಅರ್ಜಿದಾರರ ಪ್ರಮಾಣ ಪತ್ರಗಳು ಮತ್ತೊಬ್ಬರ ಹೆಸರಿನಲ್ಲಿ ತೆರೆದುಕೊಳ್ಳುತ್ತಿದೆ. ಪಿಂಚಣಿ ಪಡೆಯಲು ಆದಾಯ ಪ್ರಮಾಣ ಪತ್ರ ಕೇಳಲಾಗುತ್ತಿದೆ. ಅರ್ಜಿದಾರರಿಗೆ ಆದಾಯ ಪ್ರಮಾಣ ಪತ್ರವನ್ನು ನೀಡಲು ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ಪಟ್ಟಣದಲ್ಲಿರುವ ಶೋ ರೂಮ್, ಜವಳಿ ಅಂಗಡಿಗಳು, ಕಾರ್ಖಾನೆಗಳಲ್ಲಿ ಕಾರ್ಮಿಕ ಕಾನೂನು ಉಲಂಘನೆಯಾಗುತ್ತಿದೆ. ಎಸ್ಸಿ, ಎಸ್ಟಿ ಸಮುದಾಯದ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಈ ಬಗ್ಗೆ ತಾಲೂಕು ಕಾರ್ಮಿಕ ಅಧಿಕಾರಿಗೆ ದೂರೂ ನೀಡಿದರೆ, ನೊಂದವರೆ ದೂರು ಕೊಟ್ಟರೆ ಕ್ರಮವಹಿಸುತ್ತೇವೆ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಕಾರ್ಮಿಕ ಅಧಿಕಾರಿಗಳು ನಿಯಮಾನುಸಾರ ಕಾರ್ಮಿಕರಿಗೆ ವೇತನ, ಕೆಲಸ, ಮೂಲ ಸೌಕರ್ಯ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ ಮಾತನಾಡಿ, ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಮಾಡಬೇಕು. ಭೀಮನಗರದಲ್ಲಿ ಖಾತಾ ಆಂದೋಲನ ನಡೆಸಬೇಕು ಎಂದರು. ಭವನದಲ್ಲಿ ಬಾಕಿ ಉಳಿದಿರುವ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಿ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗುತ್ತದೆ. ಖಾತಾ ಆಂದೋಲನ ನಡೆಸಲು ಸರ್ಕಾರ ಮುಂದಾಗಿದೆ ಎಂದು ಶಾಸಕರು ತಿಳಿಸಿದರು.
ಮುಖಂಡ ಬಾಲರಾಜ್ ಮಾತನಾಡಿ, ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆ ನಿಗದಿತ ಸಮಯಕ್ಕೆ ನಡೆಯುತ್ತಿಲ್ಲ ಎಂದು ದೂರಿದರು. ಶಾಸಕರು ಮಾತನಾಡಿ, ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕೆಂದು ತಹಸಿಲ್ದಾರ್ ಅವರಿಗೆ ಸೂಚನೆ ನೀಡಿದರು.
ನಾಯಕರ ಬಡಾವಣೆ ನಿವಾಸಿ ಮಂಜುನಾಥ್ ಮಾತನಾಡಿ, ಸ್ಮಶಾನಕ್ಕೆ ಚರಂಡಿ ನೀರು ನುಗ್ಗುತ್ತಿದೆ ಎಂದರು. ಶಾಸಕರು ಪ್ರತಿಕ್ರಿಯಿಸಿ, ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮದ್ಯ ಅಕ್ರಮ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಿ
ಭೀಮನಗರ ಯಜಮಾನ ಚಿಕ್ಕಮಾಳಿಗೆ ಮಾತನಾಡಿ, ಶಾಲಾ, ಕಾಲೇಜು ಹಾಗೂ ಎಸ್ಸಿ, ಎಸ್ಟಿ ಬಡಾವಣೆಗಳಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಮದ್ಯ ಮಾರಾಟವು ಎಗ್ಗಿಲ್ಲದೆ ಸಾಗಿದೆ ಎಂದು ದೂರಿದರು.
ಅಬಕಾರಿ ನಿರೀಕ್ಷಕ ದಯಾನಂದ್ ಮಾತನಾಡಿ, ನಿಯಮದಂತೆ 2.3 ಲೀಟರ್ ಮದ್ಯ ಖರೀದಿಸಬಹುದಾಗಿದೆ. ಇದಕ್ಕೂ ಮೀರಿ ಮದ್ಯವನ್ನು ಇಟ್ಟುಕೊಂಡಿದ್ದರೆ ದೂರು ದಾಖಲಿಸುತ್ತಿದ್ದೇವೆ ಎಂದರು.
ಸತ್ತೇಗಾಲದ ರಾಜಶೇಖರ್ ಮಾತನಾಡಿ, ಪೊಲೀಸ್ ಇಲಾಖೆಗೆ ಮದ್ಯ ಅಕ್ರಮ ಮಾರಾಟ ಮಾಡುವವರ ಸಂಪೂರ್ಣ ಮಾಹಿತಿ ಇದೆ ಎಂದು ದೂರಿದರು. ತಹಸೀಲ್ದಾರ್ ಪ್ರತಿಕ್ರಿಯಿಸಿ, ಕಾನೂನಿನ ಚೌಕಟಿನಲ್ಲಿ ಮದ್ಯ ಮಾರಾಟ ಆಗಬೇಕು, ನಿಯಮ ಉಲ್ಲಂಘನೆ ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಿ ಎಂದು ಸೂಚನೆ ನೀಡಿದರು.
ಡಿವೈಎಸ್ಪಿ ಮೋಹನ್, ಪರಿಶಿಷ್ಟ ಜಾತಿ ಸಮುದಾಯದ ತಾಲೂಕು ಸಮಿತಿ ಸದಸ್ಯ ಸಿದ್ಧಾರ್ಥ, ಪರಿಶಿಷ್ಟ ವರ್ಗಗಳ ಸಮುದಾಯದ ತಾಲೂಕು ಸಮಿತಿ ಸದಸ್ಯ ಎಚ್.ಎಂ.ಹೇಮಂತ್ ಕುಮಾರ್, ಪರಿಶಿಷ್ಟ ಜಾತಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ನಟರಾಜ ಮಾಳಿಗೆ ಇತರರು ಇದ್ದರು.
ಪೊಲೀಸ್ ಬೀಟ್‌ಗಳನ್ನು ಚುರುಕುಗೊಳಿಸಬೇಕು. ಪೋಕ್ಸೋ ಪ್ರಕರಣಗಳ ಮೇಲೆ ಹದ್ದಿನ ಕಣ್ಣಿಡಬೇಕು. ವಸತಿ ನಿಲಯಗಳು, ಶಾಲೆಗಳಿಗೆ ಹೆಣ್ಣು ಮಕ್ಕಳು ಗೈರಾದರೆ ಪಾಲಕರಿಗೆ ಮಾಹಿತಿ ನೀಡಬೇಕು. ಮೂರು ತಿಂಗಳಿಗೊಮ್ಮೆ ಎಸ್ಸಿ, ಎಸ್ಟಿ ಹಿತರಕ್ಷಣಾ ಸಭೆ ಆಗಬೇಕು. ಮದ್ಯ ಅಕ್ರಮ ಮಾರಾಟ, ಗಾಂಜಾ ಮಾರಾಟ ತಡೆಯಬೇಕು. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು.
ಎ.ಆರ್.ಕೃಷ್ಣಮೂರ್ತಿ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net