ದೇಶದ ಪ್ರಗತಿಗೆ ಬಾಬುಜೀ ಕೊಡುಗೆ ಅಪಾರ

ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ರೂಪಶ್ರೀ ಚಾಲನೆ ನೀಡಿದರು.
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ರೂಪಶ್ರೀ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಭಿಮತ
  • ಜಿಲ್ಲಾಡಳಿತದಿಂದ ಡಾ.ಬಾಬು ಜಗಜೀವನ್‌ರಾಮ್ ಜಯಂತಿ
  • ಜಯಂತಿಯಲ್ಲಿ ಪಾಲ್ಗೊಳ್ಳದ ಸಮುದಾಯದ ಜನರು
ಚಾಮರಾಜನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಚಿವ ಕೆ.ವೆಂಕಟೇಶ್ ಉದ್ಘಾಟಿಸಿದರು. ಮಹಮ್ಮದ್ ಅಸ್ಗರ್, ಶ್ರೀರೂಪಾ, ಮೋನಾರೋತ್, ಎಂ.ಮುತ್ತುರಾಜು, ವೆಂಕಟೇಶ್ ಇತರರಿದ್ದರು.
ಚಾಮರಾಜನಗರ: ದೇಶದ ಪ್ರಗತಿಗೆ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್‌ರಾಮ್ ಅವರ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶಗಳು ಇಂದಿಗೂ ಅನುಕರಣೀಯ ಎಂದು ಪಶು ಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಹೇಳಿದರು.
ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್‌ರಾಮ್ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿಹಾರದ ಸಾಮಾನ್ಯ ದಲಿತ ಕುಟುಂಬದಲ್ಲಿ 1908 ರ ಏ.05 ರಂದು ಜನಿಸಿದ ಬಾಬು ಜಗಜೀವನ್ ರಾಮ್ ಅವರು ಚಿಕ್ಕವಯಸ್ಸಿನಲ್ಲೇ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆ ಸಂದರ್ಭದಲ್ಲೇ ಉತ್ತಮವಾದ ಶಿಕ್ಷಣವನ್ನು ಪಡೆದು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಸಲು ಮುಂದಾಗಿದ್ದರು. ರಾಜಕೀಯ ಅಧಿಕಾರ ಪಡೆದುಕೊಂಡ ಬಳಿಕ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸಗಳನ್ನು ಮಾಡಿದರು ಎಂದು ತಿಳಿಸಿದರು.
ಸಂವಿಧಾನ ರಚನಾ ಸಭೆಯ ಸದಸ್ಯರಾಗಿ, ಸಂಸದರಾಗಿ, ದೇಶದ ಉಪಪ್ರಧಾನಿಯಾಗಿ ಹಾಗೂ ಹಲವಾರು ಇಲಾಖೆಗಳ ಸಚಿವರಾಗಿ ವಿವಿಧ ಕಾನೂನುಗಳನ್ನು ಜಾರಿಗೆ ತಂದರು. ದೇಶದಲ್ಲಿ ಸ್ವಾವಲಂಬಿ ಬೇಸಾಯ ಕ್ರಮವನ್ನು ಅಳವಡಿಸಿದ ಕಾರಣಕ್ಕೆ ಅವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯಲಾಯಿತು. ದೇಶದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದ ಬಾಬುಜೀ ಅವರ ಆದರ್ಶ ಮತ್ತು ತತ್ವಚಿಂತನೆಗಳು ದೇಶದ ಪ್ರಗತಿಗೆ ಇಂದಿಗೂ ಉಪಕಾರಿಯಾಗಿದೆ ಎಂದರು.
ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರು ಅತ್ಯಂತ ಸಂಸದೀಯಪಟುವಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದಾರೆ. ಅವರು ಎಂ.ಎಸ್.ಸ್ವಾಮಿನಾಥನ್ ಅವರ ಸಹಕಾರದೊಂದಿಗೆ ದೇಶದಲ್ಲಿ ಮಾಡಿದ ಹಸಿರುಕ್ರಾಂತಿ ಇಂದಿಗೂ ದೇಶದ ರೈತರನ್ನು ಸ್ವಾವಲಂಬಿಯಾಗಿಸಿದೆ. ಅವರು ರಕ್ಷಣಾ ಸಚಿವರಾಗಿ ತೆಗೆದುಕೊಂಡು ನಿರ್ಧಾರಗಳು ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಅವರ ದೇಸ ಸೇವೆ ಮತ್ತು ಸಾಧನೆಗಳು ಅನುಕರಣೀಯ ಎಂದರು.
ಕಾರ್ಯಕ್ರಮದಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ), ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯಿತಿ ಮುಖ್ಯ ಹಾಗೂ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ನಗರಾಭಿವೃದ್ಧಿ ಕೋಶಯ ಯೋಜನಾ ನಿರ್ದೇಶಕ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜ್, ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ ಹಾಗೂ ಇತರರಿದ್ದರು.
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ:
ತನ್ನ 20 ನೇ ವಯಸ್ಸಸಿನಲ್ಲೇ ಸ್ವರಾಜ್ಯ ಪರಿಕಲ್ಪನೆಯನ್ನು ಹೊಂದಿದ್ದ ಡಾ.ಬಾಬು ಜಗಜೀವನ್ ರಾಮ್ ಅವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದು ಮೈಸೂರು ವಿಶ್ವವಿದ್ಯಾಲಯದ ಡಾ.ಬಾಬು ಜಗಜೀವನ್‌ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಎಚ್.ಆರ್.ಭೀಮಾಶಂಕರ್ ಬಣ್ಣಿಸಿದರು.
ಡಾ.ಬಾಬು ಜಗಜೀವನ್ ರಾಮ್ ಅವರು ಬಹಳ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. 20 ನೇ ವಯಸ್ಸಿನಲ್ಲೇ ಪೂರ್ಣ ಸ್ವರಾಜ್ಯಕ್ಕಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಕಾರ್ಮಿಕ, ರೈಲ್ವೆ, ಕೃಷಿ ಹಾಗೂ ರಕ್ಷಣಾ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ತಮ್ಮ ಅವಧೀಯಲ್ಲಿ 74 ಲಕ್ಷ ಎಕರೆ ಜಮೀನನ್ನು ಎಸ್ಸಿ, ಎಸ್ಟಿ ಜನರಿಗೆ ಜಮೀನನ್ನು ಹಂಚಿಕೆಯನ್ನು ಮಾಡಿದ್ದಾರೆ. ರಾಜ್ಯ ಸರ್ಕಾರ ಜಾರಿಗೆತಂದಿರುವ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯಲ್ಲಿ ದಲಿತರಿಗೆ ಮೀಸಲಿಟ್ಟ ಹಣ ಹಣೆಕಟ್ಟು, ರಸ್ತೆ, ವಿದ್ಯುತ್ ಹಾಗೂ ಇನ್ನಿತರೆ ಯೋಜನೆಗಳಿಗೆ ಬಳಕೆಯಾಗಿದೆ. ಈ ಅನುದಾನ ಸೂಕ್ತ ರೀತಿಯಲ್ಲಿ ಬಳಕೆಯಾದಾಗ ಮಾತ್ರ ಬಾಬುಜೀ ಅವರ ಜಯಂತಿ ಸಾರ್ಥಕವಾಗುತ್ತದೆ ಎಂದರು.
ಪಾಲ್ಗೊಳ್ಳದ ಸಮುದಾಯದ ಜನರು:
ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನ್‌ರಾಮ್ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದಿಂದ ಸಮುದಾಯದ ಜನರು ಸಂಪೂರ್ಣವಾಗಿ ದೂರು ಉಳಿದಿದ್ದರು. ಪರಿಣಾಮವಾಗಿ ಭಾವಚಿತ್ರ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಜನರಿಲ್ಲದೇ ಖಾಲಿ ಖುರ್ಚಿಗಳ ದರ್ಶನವಾಯಿತು. ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಯಲ್ಲಿ ತೋರುತ್ತಿರುವ ವಿಳಂಬ ಧೋರಣೆಯನ್ನು ಖಂಡಿಸಿ ಸಮುದಾಯ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬ ಮಾತುಗಳು ವ್ಯಕ್ತವಾದವು. ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ಅವರು ಮಾತನಾಡುತ್ತಾ, ಜನರು ಭಾಗವಹಿಸದ ಕುರಿತು ಬೇಸರ ಹೊರಹಾಕಿದರು. ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಮಾರ್ಮಿಕವಾಗಿ ಸ್ಪಷ್ಟಪಡಿಸಿದರು.
ಕಲಾತಂಡಗಳೊಂದಿಗೆ ಭಾವಚಿತ್ರ ಮೆರವಣಿಗೆ:
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಡಾ.ಬಾಬು ಜಗಜೀವನ್‌ರಾಮ್ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಸಿಇಓ ಮೋನಾರೋತ್ ಮತ್ತು ಎಸ್ಪಿ ಎಂ.ಮುತ್ತುರಾಜು ಚಾಲನೆ ನೀಡಿದರು. ಬಳಿಕ ಸಾಗಿದ ಮೆರವಣಿಗೆ ಸುಲ್ತಾನ್ ಷರ್ೀ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ, ಸಂತೇಮರಹಳ್ಳಿವೃತ್ತ, ಡಿವಿಯೇಷನ್ ರಸ್ತೆ, ಶ್ರೀಭುವನೇಶ್ವರಿ ವೃತ್ತದ ಮಾರ್ಗವಾಗಿ ವೇದಿಕೆ ಕಾರ್ಯಕ್ರಮ ನಡೆದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಅಂತ್ಯವಾಯಿತು. ವೀರಗಾಸೆ, ಡೊಳ್ಳು ಕುಣಿತ, ತಮಟೆ, ಹುಲಿವೇಷ ಹಾಗೂ ಇನ್ನಿತರೆ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net