ಹನೂರು: ಪಟ್ಟಣದಲ್ಲಿ ಈ ಬಾರಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ವಿಶೇಷವಾಗಿ 3 ದಿನಗಳ ಕಾಲ ಅಂಬೇಡ್ಕರ್ ಹಬ್ಬವಾಗಿ ವಿಜೃಂಭಣೆಯಿಂದ ಆಚರಿಸಲು ಬಲಗೈ ಸಮುದಾಯದ ಮುಖಂಡರು ನಿರ್ಧರಿಸಿದ್ದು, ಬುಧವಾರ ತಮಟೆ ಸಾರುವ ಮೂಲಕ ಹಬ್ಬಕ್ಕೆ ಆಹ್ವಾನಿಸಲಾಯಿತು.
ಪ್ರತಿ ವರ್ಷ ಅಂಬೇಡ್ಕರ್ ಜಯಂತಿಯನ್ನು ಭಾವಚಿತ್ರವನ್ನು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಸಮುದಾಯದ ಮುಖಂಡರು ದಸರಾ ಮಾದರಿಯಲ್ಲಿ ಏ.12,13 ಹಾಗೂ 14ರಂದು ಅಂಬೇಡ್ಕರ್ ಹಬ್ಬವಾಗಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದಾರೆ. ಮೊದಲನೇ ದಿನ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎರಡನೇಯ ದಿನ ಮಹಿಳೆಯರು, ಮಕ್ಕಳು, ಪುರುಷರಿಗಾಗಿ ಆಟೋಟ ಸ್ಪರ್ಧೆ, ಗಾಯನ ಹಾಗೂ ಚಿತ್ರಕಲೆ ಸ್ಪರ್ಧೆ ಇರಲಿದೆ. ಮೂರನೇ ದಿನ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು, ಇದಕ್ಕೆ ಸಮುದಾಯದ ವತಿಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಆವರಣದಲ್ಲಿ ನೆರೆದಿದ್ದ ಮುಖಂಡರು ಬುದ್ಧನಿಗೆ ವಂದನೆ ಸಲ್ಲಿಸಿ ಸಮುದಾಯದ ತೋಟಿ ಇವರಿಂದ ತಮಟೆ ಸಾರುವುದರ ಮೂಲಕ ಮುಖ್ಯ ರಸ್ತೆಯಲ್ಲಿ ಹೊರಟು ಸರ್ವ ಸಮುದಾಯದ ಜನರು ಭಾಗವಹಿಸುವಂತೆ ಕರೆ ನೀಡಲಾಯಿತು.
ಸಮುದಾಯದ ಯಜಮಾನರಾದ ಮಹೇಶ್, ಪುಟ್ಟರಾಜು, ಮಹದೇವಯ್ಯ, ಚಂದ್ರು, ನಿಂಗರಾಜು, ಮುಖಂಡರಾದ ಮಲ್ಲಿಕಾರ್ಜುನ, ನಂಜಪ್ಪ, ಕಾಂತರಾಜು, ಸತೀಶ್, ರವೀಂದ್ರ, ಸುರೇಶ್, ಸಿದ್ದರಾಜು, ಮಹೇಶ್ ಇತರರು ಇದ್ದರು.