ದಮನಿತರ ಬದುಕಿಗೆ ಬೆಳಕಾದ ಅರಸು

ಯಳಂದೂರಿನಲ್ಲಿ ಗುರುವಾರ ಆಯೋಜಿಸಿದ್ದ ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಉದ್ಘಾಟಿಸಿದರು. ಎಸ್.ಎಲ್.ನಯನಾ, ರೇಖಾ ಇತರರು ಇದ್ದರು.
ಯಳಂದೂರಿನಲ್ಲಿ ಗುರುವಾರ ಆಯೋಜಿಸಿದ್ದ ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಉದ್ಘಾಟಿಸಿದರು. ಎಸ್.ಎಲ್.ನಯನಾ, ರೇಖಾ ಇತರರು ಇದ್ದರು.
Published on

ಯಳಂದೂರು:

ಶೋಷಿತರ, ದುರ್ಬಲ ವರ್ಗಗಳ, ಅವಕಾಶ ವಂಚಿತ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದ ಮಹಾನ್ ನಾಯಕ ಡಿ.ದೇವರಾಜ ಅರಸು ಎಂದು ವೈಎಂಎಂ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಎಂ.ಶ್ವೇತಾ ಹೇಳಿದರು.

ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಡಿ.ದೇವರಾಜ ಅರಸು ಅವರ ಆಶಯ ಪೂರ್ಣ ಮಾಡುವುದೇ ನಾವು ಅವರಿಗೆ ನೀಡುವ ಉಡುಗೊರೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅರಸು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳು ರಾಷ್ಟ್ರಕ್ಕೆ ಮಾದರಿಯಾಗಿದ್ದು, ಇಂದಿಗೂ ಪ್ರಸ್ತುತವಾಗಿದೆ. ಶೋಷಿತ, ದಮನಿತ ವರ್ಗಗಳ ಉದ್ಧಾರಕ್ಕಾಗಿ ಕೊಡುಗೆ ಅಪಾರವಾಗಿದೆ. ಆ ಅವಧಿಯಲ್ಲೇ 4.85 ಲಕ್ಷ ಜನರಿಗೆ ಭೂ ಒಡೆತನದ ಹಕ್ಕನ್ನು ನೀಡಿದ್ದು ದಾಖಲೆಯಾಗಿದೆ. ಇದರೊಂದಿಗೆ ಮಲ ಹೊರುವ ಅನಿಷ್ಠ ಪದ್ಧತಿ, ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಿದ್ದು, ಹಾವನೂರು ಆಯೋಗ ರಚಿಸಿ ಶೋಷಿತ ಸಮುದಾಯದವರಿಗೆ ಅಧಿಕಾರ ಪಡೆಯಲು ಮಾಡಿದ್ದು, ಭಾಗ್ಯಜ್ಯೋತಿ, ಆಶ್ರಯ ಯೋಜನೆ ಮೂಲಕ ಬಡವರಿಗೆ ಸೂರು, ಜ್ಯೋತಿ ಒದಗಿಸಿದ್ದು, ಆರೋಗ್ಯ ಕ್ಷೇತ್ರದ ಸುಧಾರಣೆ ಸೇರಿದಂತೆ ಹಲವು ಕ್ಷೇತ್ರ ಸುಧಾರಕರಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಾಜಕಾರಣ ಮಾಡಬೇಕು ಎಂಬ ನಿಲುವು ಎಲ್ಲರಿಗೂ ಮಾದರಿಯಾಗಬೇಕು ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಮಾತನಾಡಿ, ದೇವರಾಜ ಅರಸು ಕಾಲದಲ್ಲಿ ವರುಣ ನಾಲೆ ನಿರ್ಮಾಣಕ್ಕೆ ಇದ್ದ ತೊಡಕನ್ನು ಸಮರ್ಥವಾಗಿ ನಿಭಾಯಿಸಿ ಇದನ್ನು ನಿರ್ಮಾಣ ಮಾಡುವ ಮೂಲಕ ಮೈಸೂರು ಜನರಿಗೆ ನೀರುಣಿಸಿದ್ದು, ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವಾಗಿ ಮರುನಾಮಕರಣ ಮಾಡಿದ್ದೂ ಸೇರಿ ಒಬ್ಬ ದೂರದೃಷ್ಟಿಯುಳ್ಳ ಮಹಾನ್ ನಾಯಕರಾಗಿದ್ದರು ಎಂದು ಬಣ್ಣಿಸಿದರು.
ತಹಸೀಲ್ದಾರ್ ಎಸ್.ಎಲ್.ನಯನಾ ಮಾತನಾಡಿ, ಭೂಸುಧಾರಣೆ ಕಾಯ್ದೆಯೊಳಗೆ ಲ್ಯಾಂಡ್ ಸ್ಕೇಲಿಂಗ್ ಕಾಯ್ದೆ ದೇವರಾಜ ಅರಸು ಅವರ ಕಾಲದ್ದಾಗಿತ್ತು. ಸಣ್ಣ ಹಿಡುವಳಿದಾರರಿಗೆ ಕನಿಷ್ಠ 5 ಗುಂಟೆ ಜಮೀನಾದರೂ ಇರಬೇಕು ಎಂಬ ಕಾಯ್ದೆ ಜಾರಿಯಾಗಿ ಹಲವರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಅರಸು ಕುರಿತು ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಮಾಡಿದ ಭಾಷಣ ಗಮನ ಸೆಳೆಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇಒ ಎ.ಬಿ.ವೇಣು, ಬಿಇಒ ಎಂ.ಮಾರಯ್ಯ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇಖಾ, ಸುಬ್ರಹ್ಮಣ್ಯ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ. ಮಹೇಶ್, ರಾಘವೇಂದ್ರ ಅರಸ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net