ಎಲ್ಲರಲ್ಲೂ ಆತ್ಮ ಗೌರವ ಹೆಚ್ಚಿಸುವ ಉದ್ಯೋಗ

ಹನೂರಿನಲ್ಲಿ ಮಾನಸ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಸಾಲೂರು ಶ್ರೀ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ  ಉದ್ಘಾಟಿಸಿದರು. ಡಾ.ಎಸ್.ದತ್ತೇಶ್‌ಕುಮಾರ್, ನಾಗರಾಜು, ರವಿಶಂಕರ್ ಇತರರಿದ್ದರು.
ಹನೂರಿನಲ್ಲಿ ಮಾನಸ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಸಾಲೂರು ಶ್ರೀ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಡಾ.ಎಸ್.ದತ್ತೇಶ್‌ಕುಮಾರ್, ನಾಗರಾಜು, ರವಿಶಂಕರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಲೂರು ಶ್ರೀ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿಕೆ

ಹನೂರು:

ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿರುವ ಯುವ ಪೀಳಿಗೆಗೆ ಮಾನಸಾ ಶಿಕ್ಷಣ ಸಂಸ್ಥೆ ಉದ್ಯೋಗಾವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶ್ರೀ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಶನಿವಾರ ಮಾನಸಾ ಶಿಕ್ಷಣ ಸಂಸ್ಥೆ ಹಾಗೂ ಮಾನಸ ಫೌಂಡೇಷನ್‌ನಿಂದ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣವೆನ್ನುವುದು ಪ್ರತಿಯೊಬ್ಬರಿಗೂ ಅವಶ್ಯಕ. ಚಾ.ನಗರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಸಮೃದ್ಧಿಯಿಂದ ಕೂಡಿದ್ದು, ಗ್ರಾಮೀಣ ಹಾಗೂ ಬಡಜನರಿಂದ ಕೂಡಿರುವ ಕ್ಷೇತ್ರವಾಗಿದೆ. ಹನೂರು ಭಾಗದಲ್ಲಿ ಶಿಕ್ಷಣ ಪಡೆಯುವಲ್ಲಿ ಹಲವು ಸಮಸ್ಯೆಗಳಿದ್ದರೂ ಹೆಚ್ಚು ಜನರು ಶಿಕ್ಷಿತರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜೀವನ ನಡೆಸುವುದೇ ಕಷ್ಟಕರವಾಗಿದ್ದು, ಹೆಚ್ಚು ಜನರು ಕೂಲಿ, ವ್ಯವಸಾಯ, ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ ಎಂದು ಹೇಳಿದರು.
ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಅಧಿಕಾರಿಯಾಗಬೇಕೆಂದು ಆಶಯ ಹೊಂದಿದ್ದಾರೆ. ಕೆಲ ಪಾಲಕರು ಜವಾಬ್ದಾರಿಯನ್ನು ಕಳೆದುಕೊಳ್ಳುವ ಸಲುವಾಗಿ ಮದುವೆಗೆ ಮುಂದಾದರೂ ಮಕ್ಕಳು ಉದ್ಯೋಗವನ್ನು ಪಡೆದು ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಹಂಬಲವಿದೆ. ಉದ್ಯೋಗವೆನ್ನುವುದು ಸಂಬಳವನ್ನು ಪಡೆಯುವ ಮಾರ್ಗವಲ್ಲ. ಆತ್ಮ ಗೌರವವನ್ನು ಹೆಚ್ಚಿಸುತ್ತದೆ. ಸಮಾಜದಲ್ಲಿ ಗೌರವವನ್ನು ತಂದು ಕೊಡುತ್ತದೆ. ಕುಟುಂಬದ ಭದ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಚಿಂತನೆಯನ್ನು ಮೂಡಿಸುತ್ತದೆ ಎಂದರು.
ಮಾನಸಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್ ಮಾತನಾಡಿ, ಉದ್ಯೋಗ ಮೇಳ ಆಯೋಜಿಸಲಾಗಿದ್ದು, 60 ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಿವೆ. 2019ರಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 84 ಕಂಪನಿಗಳು ಭಾಗಿಯಾಗಿದ್ದು, 720 ಉದ್ಯೋಗಾಕಾಂಕ್ಷಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಿಸಲಾಗಿತ್ತು ಎಂದು ಹೇಳಿದರು.
ಸಾಲೂರು ಶ್ರೀಗಳು ಕಳೆದ 5 ವರ್ಷಗಳಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಶ್ರೀಮಠದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದರು.
ಮೈಂಡ್ ಕೋಡಿಂಗ್ ಅಕಾಡೆಮಿ ಎಂಡಿ ತ್ರಿವೇದಾ ಮಾತನಾಡಿ, ಇಂದಿನ ಆಧುನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಉದ್ಯೋಗವನ್ನು ಪಡೆದುಕೊಳ್ಳುವುದು ಸವಾಲಿನ ಕೆಲಸ. ಹಾಗಾಗಿ ಇಲ್ಲಿ ಆಯೋಜಿಸಿರುವ ಮೇಳದಲ್ಲಿ ಪ್ರತಿಯೊಬ್ಬರೂ ಉದ್ಯೋಗವನ್ನು ಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೀ2ಐಆರ್ ಸಂಸ್ಥೆ ಸಿಇಒ ನಾಗರಾಜು, ಮಾನಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರಾಜು, ಮೇಳದ ಸಂಯೋಜಕರಾದ ರವಿಶಂಕರ್, ಶಂಕರ್, ಡಾ. ಎಂ. ಚನ್ನಶೆಟ್ಟಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net