ವಿಜೃಂಭಣೆಯ ರಥೋತ್ಸವ: ರಥೋತ್ಸವ ಹಿನ್ನೆಲೆಯಲ್ಲಿ ಮುಂಜಾನೆ 5 ಗಂಟೆ ವೇಳೆಗೆ ದೇವಿಗೆ ಹಾಲು, ಮೊಸರು, ಎಳನೀರು, ಪನ್ನೀರು, ಗಂಧ, ಅರಿಶಿಣ ಹಾಗೂ ಕುಂಕುಮ ಅಭಿಷೇಕ ನೆರವೇರಿಸಲಾಯಿತು. ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಮಹಾ ಮಂಗಳಾರತಿ ಮಾಡಲಾಯಿತು. ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ತೇರಿನಲ್ಲಿ ಕೂರಿಸಲಾಯಿತು. ಈ ವೇಳೆ ನಿಂಬೆಹಣ್ಣು ಹಾಗೂ ತೆಂಗಿನಕಾಯಿ ಸೇವೆ ನೆರವೇರಿಸಿ ಸಿಹಿ ನೈವೇದ್ಯ ಅರ್ಪಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಪಟ್ಟಣದ ಆಂಜನೇಯಸ್ವಾಮಿ ದೇಗುಲದಿಂದ ಮಹಿಳೆಯರು ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಹಾಲರವಿ ಉತ್ಸವವನ್ನು ಹೊತ್ತು ತಂದರು. ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಭಕ್ತರು ಜಯಘೋಷ ಮೊಳಗಿಸುತ್ತ ತೇರನ್ನು ಎಳೆದರು. ಹರಕೆ ಹೊತ್ತ ಭಕ್ತರು ಧನ, ಧಾನ್ಯವನ್ನು ಎಸೆದು ಭಕ್ತಿ ಭಾವ ಮೆರೆದರು.