ನಗರಸಭೆಗೆ ಬಂದ ಡಿಸಿಗೆ ದೂರುಗಳ ಸುರಿಮಳೆ

ಕೊಳ್ಳೇಗಾಲ ನಗರಸಭೆಗೆ ಮಂಗಳವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಸಾರ್ವಜನಿಕರು ಇ-ಸ್ವತ್ತು ವಿಳಂಬದ ಬಗ್ಗೆ ದೂರು ನೀಡಿದರು.
ಕೊಳ್ಳೇಗಾಲ ನಗರಸಭೆಗೆ ಮಂಗಳವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಸಾರ್ವಜನಿಕರು ಇ-ಸ್ವತ್ತು ವಿಳಂಬದ ಬಗ್ಗೆ ದೂರು ನೀಡಿದರು.
Published on

ಕೊಳ್ಳೇಗಾಲ ಪೌರಾಯುಕ್ತರ ಕಚೇರಿ ಮುಂಭಾಗ ಕಾದು ಕುಳಿತ ಜನರು

ಕೊಳ್ಳೇಗಾಲ: ಇ-ಸ್ವತ್ತು ವಿಳಂಬ ಆಗುತ್ತಿದೆ. ವರ್ಷ ಕಳೆದರೂ ಖಾತೆ ನವೀಕರಣ ನೀಡಿಲ್ಲ. ಕಚೇರಿಗೆ ಅಲೆದು ಸಾಕಾಗಿದೆ, ಪೌರಾಯುಕ್ತರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದಲ್ಲದೆ, ಸಾರ್ವಜನಿಕರನ್ನು ಸತಾಯಿಸದೆ ಸಕಾಲಕ್ಕೆ ಇ-ಸ್ವತ್ತು ನೀಡುವಂತೆ ಕೊಳ್ಳೇಗಾಲ ನಗರಸಭೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಸಾರ್ವಜನಿಕರು ಕೈ ಮುಗಿದು ಕೇಳಿಕೊಂಡರು.
ಜನಗಣತಿ ಉತ್ತಮ ಕಾರ್ಯ ಸಾಧಕರಿಗೆ ಸನ್ಮಾನ ಹಾಗೂ ಕಚೇರಿ ಕಾರ್ಯವೈಖರಿ ಪರಿಶೀಲಿಸಲು ಮಂಗಳವಾರ ನಗರಸಭೆ ಕಚೇರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಶ್ರೀರೂಪಾ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಲು ಪೌರಾಯುಕ್ತರ ಕಚೇರಿ ಮುಂಭಾಗದ ಆವರಣದಲ್ಲಿ ಕೆಳಗೆ ಕಾದು ಕುಳಿತ ಸಾರ್ವಜನಿಕರು ಡಿಸಿ ಅವರ ಬಳಿಕ ಸುತ್ತುವರಿದು ದೂರಿನ ಸುರಿಮಳೆಗರೆದರು.
ನಗರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯ ಮಧುಚಂದ್ರ ಮಾತನಾಡಿ, ಮನೆ ಕಟ್ಟಲು, ಮಕ್ಕಳ ವಿದ್ಯಾಭ್ಯಾಸಕ್ಕೆ, ಸಾಲ ಸೌಲಭ್ಯ ಪಡೆಯಲು ಇ-ಸ್ವತ್ತು ಆಧಾರವಾಗಿದೆ. ಹಾಗಾಗಿ ಸಾರ್ವಜನಕರಿಗೆ ತೊಂದರೆ ಮಾಡದೇ ಇ-ಸ್ವತ್ತು ಮಾಡಿಕೊಡುವಂತೆ ಕೈ ಮುಗಿದು ಕೇಳಿದರಲ್ಲದೆ, ಇ-ಸ್ವತ್ತು ನವೀಕರಣಕ್ಕೆ ಸಕಾಲದಲ್ಲಿ ಅರ್ಜಿ ತೆಗೆದುಕೊಳ್ಳುತ್ತಿಲ್ಲ. ಅನಧಿಕೃತ ಬಡವಾಣೆಗಳಿಗೆ ಎ-ಖಾತೆಗಳಿಗೆ ನವೀಕರಣ ಪ್ರಕ್ರಿಯೆಗೆ ಅರ್ಜಿ ಹಾಕಿದರೆ ಬಿ-ಖಾತೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇ-ತಂತ್ರಾಶದಲ್ಲಿ 10 ಡ್ರಾಫ್ಟ್ ಮಂಜೂರಾದ ಬಳಿಕ 1 ತಿದ್ದುಪಡಿಗೆ ಮಾತ್ರ ಅವಕಾಶವಿರುವುದು ಸಮಸ್ಯೆಯಾಗಿದೆ ಎಂದು ದೂರಿದರು.
ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಸ್ಥಳದಲ್ಲಿದ್ದ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಅವರಿಗೆ ಎ ಟು ಬಿ ಕಡತಗಳ ಪಟ್ಟಿ ನೀಡಿ ನಂತರ ಪೌರಾಡಳಿತ ನಿರ್ದೇಶಕರ ಜತೆ ಚರ್ಚಿಸುವುದಾಗಿ ತಿಳಿಸಿದರು.
ನಗರಸಭೆ ಮಾಜಿ ಸದಸ್ಯೆ ಜಯಮರಿ ಮಾತನಾಡಿ, ನಗರಸಭೆಯಲ್ಲಿ ಅಧಿಕಾರಿಗಳು ಲಾಭವಿರುವ ಕೆಲಸ ಮಾತ್ರ ಮಾಡುತ್ತಿದ್ದಾರೆ. ತಕರಾರು ಅರ್ಜಿ ನೀಡಿದ್ದರು ಖಾತೆ ನೀಡಿದ್ದಾರೆ. ಸೂಕ್ತ ದಾಖಲೆಗಳಿದ್ದರೆ ನೀಡು ತ್ತಿಲ್ಲ. ಇ-ಸ್ವತ್ತು ವಿಳಂಬ ಸಮಸ್ಯೆ ಬಗ್ಗೆ ಸರ್ಕಾರಕ್ಕೂ ದೂರು ನೀಡಿದ್ದೇನೆ ಎಂದರು. ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮುಖಂಡ ರಾಜಶೇಖರ್ ಮಾತನಾಡಿ, ಇ-ಆಸ್ತಿಗೆ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಕಾರಣ ಕೊಡದೆ ರಿಜೆಕ್ಟ್ ಮಾಡಲಾಗುತ್ತಿದೆ ಎಂದರು. ಈ ವೇಳೆ ಇನ್ನಿತರ ಮುಖಂಡರು ಹಾಗು ಸಾರ್ವಜನಿಕರು ಹಿಂದೆ ಪ್ರಭಾರ ಪೌರಾಯುಕ್ತರಾಗಿದ್ದ ನಟರಾಜು ಅವರ ಅವಧಿಯಲ್ಲಿ ಇ-ಸ್ವತ್ತು ಕೆಲಸ ಆಗುತ್ತಿತ್ತು. ನೂತನ ಪೌರಾಯುಕ್ತರು ಬಂದ ಬಳಿಕ ವಿಳಂಬ ಆಗುತ್ತಿದೆ ಎಂದು ಆರೋಪಿಸಿದರು.
ಕಮಿಟಿ ರಚಿಸಿ ಕ್ರಮವಹಿಸುವ ಭರವಸೆ:ಇ-ಸ್ವತ್ತು ವಿಳಂಬ, ಬಾಕಿ ಉಳಿದಿರುವ ಬಗ್ಗೆ ಪರಿಶೀಲಿಸಲು ಎಸಿ ದಿನೇಶ್‌ಕುಮಾರ್ ಮೀನಾ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿ ಒಳಗೊಂಡ ಕಮಿಟಿ ರಚನೆ ಮಾಡಲಾಗುತ್ತದೆ. ಈ ಕಮಿಟಿಯು ಇ-ಸ್ವತ್ತು ಪ್ರಕ್ರಿಯೆ ನ್ಯೂನತೆ, ಸಮಸ್ಯೆ ಬಗ್ಗೆ ತನಿಖೆ ನಡೆಸಿ ವರದಿ ನೀಡಿದ ಆಧಾರದ ಮೇಲೆ ಕ್ರಮ ವಹಿಸಲಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net