

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ದೇಶಾದ್ಯಂತ ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿ ಕ್ರಿಯೆ ವ್ಯಕ್ತವಾಯಿತು.
ಜಿಲ್ಲೆಯ ವಿವಿಧೆಡೆ ಸಿಐಟಿಯು, ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ, ಗ್ರಾಮಪಂಚಾಯಿತಿ ನೌಕರರ ಸಂಘ, ಆಶಾ ಕಾರ್ಯಕರ್ತೆಯರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಬಂದ್ ಆಚರಿಸಲಿಲ್ಲ. ಎಂದಿನಂತೆ ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಆಸ್ಪತ್ರೆ ಗಳು, ಮೆಡಿಕಲ್ ಸ್ಟೋರ್‌ಗಳು ಕರ್ತವ್ಯ ನಿರ್ವಹಿಸಿದವು. ಅಲ್ಲದೇ ಆಟೋ, ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬೃಹತ್ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ಸಮಿತಿ, ಸೆಂಟರ್ ಆಫ್ ಇಂಡಿ ಯನ್ ಟ್ರೇಡ್ ಯೂನಿಯನ್ಸ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಉದ್ಯಾನದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಅಲ್ಲಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ 44 ಕಾರ್ಮಿಕ ಕಾನೂನುಗಳನ್ನು ನಾಶ ಮಾಡಿ ವೇತನ ಸಂಹಿತೆ, ವೃತ್ತಿ ಆರೋಗ್ಯ, ಸುರಕ್ಷತೆ ಹಾಗೂ ಕೆಲಸದ ಪರಿಸ್ಥಿತಿಗಳ ಸಂಹಿತೆಗಳನ್ನು ಅಂಗೀಕರಿಸಿದೆ. ರಾಷ್ಟ್ರೀಯ ಸಮಾನ ಕನಿಷ್ಟ ವೇತನವನ್ನು 21 ಸಾವಿರ ರೂ. ನಿಗದಿ ಮಾಡಬೇಕು. ಎಲ್ಲರಿಗೂ ಸರ್ಕಾರದಿಂದಲೇ 10 ಸಾವಿರ ರೂ. ಕನಿಷ್ಟ ಖಾತ್ರಿ ಪಿಂಚಣಿ ಜಾರಿ ಮಾಡಬೇಕು ಎಂದರು.
ಆರ್ಥಿಕ ಹಿಂಜರಿತಕ್ಕೆ ಕಾರಣವಾದ ನೀತಿಗಳಿಂದಾಗಿ ಉದ್ಯೋಗ ಕಳೆದುಕೊಳ್ಳುತ್ತಿರುವ ಕಾರ್ಮಿಕರ ಉದ್ಯೋಗ ಮತ್ತು ಆದಾಯಗಳ ರಕ್ಷಣೆ ಹಾಗೂ ಉದ್ಯೋಗ ಸೃಷ್ಟಿ ಮಾಡಬೇಕು. ಗ್ರಾಮೀಣ ಮತ್ತು ನಗರದ ಎಲ್ಲ ಕುಟುಂಬಗಳನ್ನು ಒಳಗೊಂಡ ಸಮರ್ಪಕವಾದ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಬೇಕು. ಎಲ್ಲ ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕೆಂಬ ಐಎಲ್‌ಒ ತೀರ್ಮಾನ ಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಮೈಷುಗರ್ಸ್ ಮತ್ತು ಪಿಎಸ್‌ಎಸ್‌ಕೆ ಕಾರ್ಖಾನೆಗಳನ್ನು ಆರಂಭಿಸಬೇಕು. ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಶೇ.4 ರ ದರದಲ್ಲಿ ಸಾಲ ಮತ್ತು ಸಬ್ಸಿಡಿ ನೀಡಬೇಕು. ವಿದ್ಯುತ್ ಮತ್ತು ಕುಡಿಯುವ ನೀರಿನ ದರವನ್ನು ಇಳಿಸಬೇಕು. ಅಂಗವಿಕಲರಿಗೆ ಮಾಸಿಕ ಭತ್ಯೆ ಹೆಚ್ಚಳ ಮಾಡ ಬೇಕು. ಸಾರ್ವಜನಿಕರ ಉದ್ದಿಮೆಗಳ ಷೇರು ವಿಕ್ರಯ ಮತ್ತು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.
ಪೌರಕಾರ್ಮಿಕರ ಕೆಲಸದ ಸಂದರ್ಭದಲ್ಲಿ ಸುರಕ್ಷತೆ ಖಾತ್ರಿಗೊಳಿಸಬೇಕು. ಕಾರ್ಮಿಕ ವಿರೋಧಿ ಕಾರ್ಮಿಕ ಕಾಯ್ದೆಯ ತಿದ್ದುಪಡಿ ಮತ್ತು ಕ್ರೋಡೀಕರಣವನ್ನು ಹಿಂಪಡೆಯಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ಸೂಕ್ತವಾದ ಸಂಗ್ರಹ ಸೌಲಭ್ಯಗಳೊಂದಿಗೆ ಡಾ.ಸ್ವಾಮಿನಾಥನ್ ಶಿಫಾರಸ್ಸಿನಂತೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಹೇಳಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಜಾರಿಗೊಳಿಸಬೇಕು. ನಿವೇಶನ ರಹಿತರಿಗೆ ಮನೆ ನಿವೇಶನ ಹಕ್ಕುಪತ್ರ ನೀಡಬೇಕು. ಗ್ರಾಮೀಣ ಸಂಕಷ್ಟ ವನ್ನು ಕಡಿಮೆ ಮಾಡಲು ಹೆಚ್ಚಿನ ಸಾರ್ವಜನಿಕ ಹೂಡಿಕೆ ಮಾಡಬೇಕು. ಪೊಲೀಸ್ ಠಾಣೆಗಳನ್ನು ಮಹಿಳಾ ಸ್ನೇಹಿಯಾಗಿ ಪರಿವರ್ತಿ ಸ ಬೇಕು ಎಂದು ಮನವಿ ಮಾಡಿದರು. ಸ್ಥಳಕ್ಕಾಗಮಿಸಿದ ಉಪತಹಸೀಲ್ದಾರ್ ತಬಸುಮ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಅಂತ್ಯ ಗೊಳಿಸಲಾಯಿತು. ಸುರೇಶ್, ರೇವಮ್ಮ, ಕವಿತಾ, ಶಾಹಿದಾಬಾನು, ಯಶೋಧಮ್ಮ, ಉಮಾಮಹೇಶ್ವರಿ ಇತರರು ಹಾಜರಿದ್ದರು.