

ಚಾಮರಾಜನಗರ: ಬಂಡೀಪುರ, ಬಿಆರ್‌ಟಿ ಎರಡು ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಿರುವ ಜಿಲ್ಲೆಯಲ್ಲಿ ಕಳ್ಳಬೇಟೆಗಾರರ ಅಕ್ರಮ ಚಟುವಟಿಕೆಗಳು ಕಾಡಂಚಿನ ಗ್ರಾಮಗಳಲ್ಲಿ ಪತ್ತೆಯಾಗುತ್ತಿದ್ದವು. ಆದರೀಗ ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲೂ ಸದ್ದಿಲ್ಲದೆ ಈ ಜಾಲ ಸಕ್ರಿಯವಾಗಿರುವುದಕ್ಕೆ ನಿದರ್ಶನ ಸಿಕ್ಕಿದೆ. ಹುಲಿ ಉಗುರು ಮಾರಾಟ ಮಾಡಲು ಯತ್ನಿಸಿದ್ದ ಆರೋಪದಡಿ ಬುಧವಾರ ಇಬ್ಬರನ್ನು ಜಿಲ್ಲಾ ಪೋಲೀಸರು ಬಂಧಿಸಿದ್ದಾರೆ.
ಚಾಮರಾಜನಗರದ ಖಾಸಗಿ ರೆಸಿಡೆನ್ಸಿ ಬಳಿ ಹುಲಿ ಉಗುರು ಮಾರಾಟ ಮಾಡಲು ಯತ್ನಿಸಿದ್ದ ನಗರದ ಕೆ.ಪಿ.ಮೊಹಲ್ಲಾದ ನಿವಾಸಿ ಯಾಸೀರ್ ಅರಾತ್(19), ಮುಬಾರಕ್ ಮೊಹಲ್ಲಾದ ನಿವಾಸಿ, ಫರ್ಹಾದ್ ಉರ್ ರೆಹಮಾನ್ ಷರೀಷ್(33) ಅನ್ನು ಸಿ.ಇ.ಎನ್ ಪೋಲೀಸರು ಬಂಧಿಸಿದ್ದಾರೆ. ಇವರಿಬ್ಬರಿಂದ ಬೆರಳಿನ ಮೂಳೆ ಸಮೇತ ಇದ್ದ 8 ಹುಲಿ ಉಗುರುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬಾತ್ಮೀದಾರರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಖಾಸಗಿ ರೆಸಿಡೆನ್ಸಿ ಬಳಿಗೆ ತೆರಳಿದ್ದಾರೆ. ಅಲ್ಲಿ ಸೆರೆ ಸಿಕ್ಕ ಯಾಸೀರ್ ಪ್ಯಾಂಟ್ ಜೇಬಿನಲ್ಲಿದ್ದ ಪೊಟ್ಟಣದಲ್ಲಿ 5 ಹುಲಿ ಉಗುರುಗಳು ಮತ್ತು ಈತನ ಜತೆಗಿದ್ದ ಫರ್ಹಾದ್ ಜೇಬಿನಲ್ಲಿದ್ದ ಕವರ್‌ನಲ್ಲಿ 3 ಹುಲಿ ಉಗುರು ಪತ್ತೆಯಾಗಿವೆ.
ಈ ಇಬ್ಬರೂ ಆರೋಪಿಗಳು ನಗರದಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ಇವರಿಗೆ ಹುಲಿ ಉಗುರು ಹೇಗೆ ಸಿಕ್ಕಿತು?, ಕಳ್ಳಬೇಟೆಗಾರರ ಜಾಲ ಜಿಲ್ಲಾ ಕೇಂದ್ರದಲ್ಲಿ ಸದ್ದಿಲ್ಲದೆ ಎಷ್ಟು ದಿನಗಳಿಂದ ಹೀಗೆ ವ್ಯವಹಾರ ನಡೆಸುತ್ತಿದೆ? ಇನ್ನಿತರ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿ.ಎ.ಎನ್ ಠಾಣೆಯ ಪಿಎಸ್‌ಐ ಮಾದೇಶ್, ಇನ್ಸ್‌ಪೆಕ್ಟರ್ ಮಹದೇವಶೆಟ್ಟಿ ಮತ್ತು ಸಿಬ್ಬಂದಿ ಎಂ.ಮಹೇಶ, ಮಂಜುನಾಥ, ರಾಜು, ಜಗದೀಶ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಅಭಿನಂದನೆ ತಿಳಿಸಿದ್ದಾರೆ.