

ಚಾಮರಾಜನಗರ: ನಿಗದಿ ಮಾಡಿದ ಸ್ಥಳದಲ್ಲಿ ವ್ಯಾಪಾರ ಮಾಡದೆ ನಗರದ ವಿವಿಧೆಡೆ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ನಗರಸಭೆ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.
ದೊಡ್ಡಂಗಡಿ ಬೀದಿಯಲ್ಲಿ ಅಧಿಕಾರಿಗಳನ್ನು ಕಂಡ ತಕ್ಷಣ ಕೈಗಾಡಿಯನ್ನು ಮರೆಮಾಚಿಕೊಂಡು ಅಧಿಕಾರಿಗಳು ಮರೆಯಾದ ಮೇಲೆ ಮತ್ತೆ ತೆರೆದು ವ್ಯಾಪಾರ ಮಾಡುತ್ತಿದ್ದರು. ಇದನ್ನು ಗಮನಿಸಿದ ಆರೋಗ್ಯ ನಿರೀಕ್ಷಕರು ಎಲ್ಲರನ್ನು ಪತ್ತೆ ಹಚ್ಚಿ ತರಕಾರಿಯನ್ನು ಮಾರುಕಟ್ಟೆಯಲ್ಲಿ ಮಾರಬೇಕು. ಇದು ಜಿಲ್ಲಾಡಳಿತದ ಸೂಚನೆ ಎಂದು ಮನವರಿಕೆ ಮಾಡಿದರು. ಕೆಲಕಾಲ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ನಡುವೆ ವಾಗ್ವಾದ ನಡೆಯಿತು.
ನಿಗದಿಪಡಿಸಿದ ಸ್ಥಳದಲ್ಲಿ ವ್ಯಾಪಾರ ನಡೆಯುತ್ತಿಲ್ಲ. ಇನ್ನು ಅನೇಕ ಜನರು ನಗರದ ವಿವಿಧೆಡೆ ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ವ್ಯಾಪಾರಿಗಳು ಆರೋಪಿಸಿದರು. ಸೂಚನೆಯನ್ನು ಮೀರಿಯೂ ಬೇರೆಡೆಗಳಲ್ಲಿ ವ್ಯಾಪಾರ ಮಾಡುವವರಿಗೆ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ತಕ್ಕ ಪಾಠ ಕಲಿಸಲಾಗುವುದು ಎಂದು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶರವಣ ಎಚ್ಚರಿಸಿದರು. ನಂತರ ಎಲ್ಲ ವ್ಯಾಪಾರಿಗಳನ್ನು ನಿಗದಿಪಡಿಸಿದ್ದ ಮಾರುಕಟ್ಟೆಗೆ ಕಳುಹಿಸಲಾಯಿತು. ಇದೇ ವೇಳೆ ಚಾಮರಾಜೇಶ್ವರ ದೇವಸ್ಥಾನದ ಸಮೀಪ ಇದ್ದ ಹೂ ಮಾರಾಟ ಮಾಡುತ್ತಿದ್ದ ಪೆಟ್ಟಿ ಅಂಗಡಿಯನ್ನು ನಗರಸಭೆ ಅಧಿಕಾರಿಗಳು ವಶಕ್ಕೆ ಪಡೆದರು.
ದೊಡ್ಡಂಗಡಿ ಬೀದಿ, ಮಹಾವೀರ ಸರ್ಕಲ್‌ಗಳಲ್ಲಿ ಪೊಲೀಸ್ ಸಹಾಯದಿಂದ ತೆರವುಗೊಳಿಸಲಾಯಿತು. ಮತ್ತೆ ಇದೇ ರೀತಿ ವ್ಯಾಪಾರಕ್ಕೆ ಮುಂದಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಅರೋಗ್ಯ ನಿರೀಕ್ಷಕರಾದ ಪ್ರಸಾದ್, ಮಂಜು, ಮಣಿನಾಯಕ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.