

ಚಾಮರಾಜನಗರ: ರಾಜ್ಯದಲ್ಲಿ ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿ ಮಾಡಿದ್ದ ಮೂರನೇ ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಯಿತು.
ಮುಂಜಾನೆ ವೇಳೆ ಎಂದಿನಂತೆ ಜನ ಸಂಚಾರದಿಂದ ಕೂಡಿತ್ತು. ನಗರ ಪೊಲೀಸರು ರಸ್ತೆಗಿಳಿದ ನಂತರ ಜನರು ಮನೆ ಸೇರಿಕೊಂಡರು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ, ಸತ್ತಿ ರೋಡ್, ದೊಡ್ಡಂಗಡಿ ಬೀದಿಗಳಲ್ಲಿ ಜನಸಂಖ್ಯೆ ವಿರಳವಾಗಿತ್ತು. ಆದರೆ ಸಂತೇಮರಹಳ್ಳಿ ರಸ್ತೆ ಕಡೆಗಳಲ್ಲಿ ಲಾಕ್ ವಾತಾವರಣವೇ ಕಂಡು ಬರಲಿಲ್ಲ.
ಎಂದಿನಂತೆ ಜನರು ರಸ್ತೆ, ಅಂಗಡಿ ಮುಂಗಟ್ಟುಗಳ ಬಳಿ ಆರಾಮವಾಗಿ ಕುಳಿತಿದ್ದರೂ ಕೆಲವೆಡೆ ಗುಂಪುಗೂಡಿರುವುದು ಕಂಡುಬಂದಿತು. ಮಧ್ಯಾಹ್ನದ ವೇಳೆಗೆ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ವಾಹನ ಸಂಚಾರ, ಅಂಗಡಿ-ಮುಂಗಟ್ಟುಗಳು ಬಾಗಿಲು ತೆರೆಯದೆ ಕಟ್ಟುನಿಟ್ಟಾಗಿ ನಿಯಮ ಪಾಲಿಸಿದ ಪರಿಣಾಮ ಇಡೀ ಜಿಲ್ಲೆ ಖಾಲಿಯಾಗಿ ಕಾಣಿಸಿತು.
ಔಷಧ ಅಂಗಡಿ, ಮಾಂಸ ಮಾರಾಟ ಮಳಿಗೆಗಳು, ಹಾಲು ಮತ್ತು ದಿನಸಿ ಅಂಗಡಿ, ವೈದ್ಯಕೀಯ ಸೇವೆಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸಿದವು. ಉಳಿದಂತೆ ಮದ್ಯದಂಗಡಿ, ಹೋಟೆಲ್‌ಗಳು ಸೇರಿ ಎಲ್ಲ ರೀತಿ ವಾಣಿಜ್ಯ ಚಟುವಟಿಕೆ ಬಂದ್ ಆಗಿದ್ದವು. ಕೆಎಸ್ಸಾರ್ಟಿಸಿ ಬಸ್ ಸಂಚಾರವನ್ನು ಲಾಕ್‌ಡೌನ್ ಹಿನ್ನೆಲೆ ಸ್ಥಗಿತಗೊಳಿಸಲಾಗಿತ್ತು. ಖಾಸಗಿ ಬಸ್‌ಗಳು ನಿಂತಲ್ಲೇ ನಿಂತಿದ್ದವು. ಆಟೋಗಳು ರಸ್ತೆಗಿಳಿಯಲಿಲ್ಲ.
ಜಿಲ್ಲಾಸ್ಪತ್ರೆಯಲ್ಲಿಯೂ ಜನಸಂಖ್ಯೆ ವಿರಳವಾಗಿತ್ತು. ಗ್ರಾಮೀಣ ಭಾಗಕ್ಕೂ ಕರೊನಾ ಹರಡುತ್ತಿರುವ ಹಿನ್ನೆಲೆ ಗ್ರಾಮೀಣ ಭಾಗದ ಜನರೂ ನಗರದತ್ತ ಬಾರದೆ ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದರು.