ಧಾರ್ಮಿಕ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಅನುಸರಿಸಿ

3MAHESH2
Published on

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ, ಜೂ.8ರಿಂದ ಧಾರ್ಮಿಕ ಕೇಂದ್ರಗಳ ಆರಂಭ ಹಿನ್ನೆಲೆ

ಚಾಮರಾಜನಗರ: ಲಾಕ್‌ಡೌನ್‌ನಿಂದಾಗಿ ಬಾಗಿಲು ಮುಚ್ಚಿದ್ದ ಧಾರ್ಮಿಕ ಕೇಂದ್ರಗಳನ್ನು ಸರ್ಕಾರದ ಸೂಚನೆ ಮೇರೆಗೆ ಜೂ.8ರಿಂದ ತೆರೆಯಲಾಗುತ್ತಿದ್ದು, ದೇಗುಲ, ಚರ್ಚ್, ಮಸೀದಿಗಳಲ್ಲಿ ಕರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಕ್‌ಡೌನ್ ಸಡಿಲಿಕೆಗೊಂಡು ದೇಗುಲ,ಮಸೀದಿ, ಚರ್ಚ್‌ಗಳು ಆರಂಭವಾಗುತ್ತಿವೆ. ಜನರ ಮೇಲೆ ಧಾರ್ಮಿಕತೆಯ ಪ್ರಭಾವ ಹೆಚ್ಚಾಗಿರುವುದರಿಂದ ಧರ್ಮಗುರುಗಳು, ಅರ್ಚಕರು ಭಕ್ತರಲ್ಲಿ ಕರೊನಾ ಜಾಗೃತಿ ಮೂಡಿಸುವ ಕೆಲಸವನ್ನು ತಪ್ಪದೆ ಮಾಡಬೇಕೆಂದು ಎಂದು ಮನವಿ ಮಾಡಿದರು.
ದೇಗುಲ, ಚರ್ಚ್, ಮಸೀದಿಗಳಲ್ಲಿ ಪ್ರಾರ್ಥನೆಗಳು ನಡೆಯಲಿ. ಆದರೆ ಹೆಚ್ಚಿನ ಜನರನ್ನು ಸೇರಿಸಿ ವಿಶೇಷ ಉತ್ಸವ, ಆರಾಧನೆಗಳನ್ನು ಮಾಡಬೇಡಿ. 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯರನ್ನು ಸಾಧ್ಯವಾದಷ್ಟು ಧಾರ್ಮಿಕ ಕೇಂದ್ರಗಳಿಗೆ ಬಾರದಿರುವಂತೆ, ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಪ್ರೇರೇಪಿಸಿ. ದಿನದ ಪೂಜಾ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿಸಿದರೆ ಜನಜಂಗುಳಿ ತಪ್ಪುತ್ತದೆ. ದೇಗುಲಕ್ಕೆ ಬರುವ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡಬೇಕೆಂದು ಸೂಚಿಸಲು ನಿರ್ದೇಶನ ನೀಡಿದರು.
ರಾಜ್ಯದಲ್ಲಿ ಚಾಮರಾಜನಗರ ಏಕೈಕ ಕರೊನಾ ಮುಕ್ತ ಜಿಲ್ಲೆಯಾಗಿ ಉಳಿದಿದೆ. ಲಾಕ್‌ಡೌನ್ ಸಂಕಷ್ಟದಲ್ಲೂ ಜಿಲ್ಲೆಯ ಜನತೆ ಸಂಯಮ ಪ್ರದರ್ಶಿಸಿದ್ದಾರೆ. ಇದೀಗ ಲಾಕ್‌ಡೌನ್ ನಿಯಮಗಳು ಸಡಿಲಿಕೆಗೊಂಡು ದೇಗುಲಗಳನ್ನು ತೆರೆಯಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶಾಲೆಗಳು ಆರಂಭಗೊಳ್ಳುತ್ತಿರುವುದರ ನಡುವೆ ಕರೊನಾ ತಡೆಗಟ್ಟುವುದು ಸವಾಲಿನ ಕೆಲಸವಾಗಿದೆ. ಈ ಕಾರಣಕ್ಕೆ ಧಾರ್ಮಿಕ ಕೇಂದ್ರಗಳಲ್ಲಿ ಕೋವಿಡ್-19 ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಿ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರಗಳ ಅರ್ಚಕರು, ಧರ್ಮಗುರುಗಳು ಭಾಗವಹಿಸಿದ್ದರು.
ಸಾಷ್ಟಾಂಗ ನಮಸ್ಕಾರ ಹಾಕಿದರು: ಧಾರ್ಮಿಕ ಕೇಂದ್ರಗಳನ್ನು ಜೂ.8ರಿಂದ ಆರಂಭಗೊಳ್ಳುತ್ತಿರುವ ಹಿನ್ನೆಲೆ ಬುಧವಾರ ಕರೆದಿದ್ದ ಸಭೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳ ಮುಖ್ಯಸ್ಥರಲ್ಲಿ ಕರೊನಾ ತಡೆಗಟ್ಟುವ ಸಂಬಂಧ ಅಭಿಪ್ರಾಯ ಹಂಚಿಕೊಳ್ಳಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕೋರಿದರು.
ಈ ವೇಳೆ ಹನೂರಿನ ಧರಣೇಂದ್ರ ಎನ್ನುವವರು ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್‌ಕುಮಾರ್, ಅಪರ ಜಿಲ್ಲಾಧಿಕಾರಿ ಆನಂದ್ ಸೇರಿದಂತೆ ಇತರೆ ಅಧಿಕಾರಿಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಜಿಲ್ಲೆಯನ್ನು ಹಸಿರು ವಲಯದಲ್ಲಿ ಉಳಿಸಲು ಶ್ರಮಿಸಿರುವುದಕ್ಕೆ ಧನ್ಯವಾದ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net