ಪಟಾಕಿ ಅಂಗಡಿಗೆ ಅನುಮತಿ ಕಡ್ಡಾಯ

19rajesh6
Published on

ಚಾಮರಾಜನಗರ: ಪಟಾಕಿಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಟಾಕಿ ವರ್ತಕರು ಹಾಗೂ ಮಾಲೀಕರು ದೀಪಾವಳಿ ಹಬ್ಬದಂದು ಪಟಾಕಿ ಅಂಗಡಿಗಳನ್ನು ತೆರೆಯಲು ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು ಎಂದು ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್ ಪಾಟೀಲ್ ಸೂಚನೆ ನೀಡಿದರು.

ನಗರದ ಅಗ್ನಿಶಾಮಕ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲೆಯ ಪಟಾಕಿ ವರ್ತಕರಿಗೆ ಅನಾಹುತ ತಡೆಗಟ್ಟುವ ಹಾಗೂ ಅಗ್ನಿಶಮನದ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಅಂಗಡಿ ತೆರೆಯಲು ಕಡ್ಡಾಯವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು. ಪಟಾಕಿ ಮಾರಾಟದ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಮಾರಾಟ ಮಳಿಗೆ ತೆರೆಯಲು ಅನುಮತಿ ಪಡೆದ ನಿಗದಿತ ಸ್ಥಳಕ್ಕಿಂತ ಬೇರೆ ಕಡೆ ಮಳಿಗೆ ತೆರೆದರೆ ಅಂತಹವರ ವಿರುದ್ಧ ದೂರು ಬಂದರೆ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯವರು ಗುರುತಿಸಿದ ಜಾಗದಲ್ಲಿಯೇ, ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಬೇಕು. ಅದು ಬಿಟ್ಟು ಬೇರೆ ಕಡೆ ತೆರೆದರೆ ದಾಳಿ ಮಾಡಿ ಕ್ರಮ ಜರುಗಿಸಲಾಗುವುದು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಶಿವಾಜೀರಾವ್ ಪವರ್ ಹಾಗೂ 5 ತಾಲೂಕಿನಿಂದ ಆಗಮಿಸಿದ್ದ ಚಿಲ್ಲರೆ ಪಟಾಕಿ ಮಾರಾಟಗಾರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net