ತಜ್ಞರ ಸಲಹೆಯೊಂದಿಗೆ ಕೃಷಿ ಚಟುವಟಿಕೆ ಆರಂಭಿಸಿ

22 HANUR 4
Published on

ಹನೂರು: ಮುಂಗಾರು ಆರಂಭವಾಗಿರುವುದರಿಂದ ರೈತರು ಕೃಷಿ ತಜ್ಞರಿಂದ ಸಲಹೆ, ಸೂಚನೆಗಳನ್ನು ಪಡೆದು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಇದರಿಂದ ಕೃಷಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಶ್ರೀನಿವಾಸ ಶೆಟ್ಟಿ ತಿಳಿಸಿದರು.

ತಾಲೂಕಿನ ರಾಮಾಪುರ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಬೆಳೆ ಪದ್ಧತಿ, ಬೀಜೋಪಚಾರ ಹಾಗೂ ಕೀಟನಾಶಕ ಬಳಕೆ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಹೆಚ್ಚಿನ ರೈತರು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಕೆಲವರು ಕೃಷಿ ಚಟುವಟಿಕೆಯನ್ನು ಕೈಗೊಳ್ಳುವಲ್ಲಿ ಕೃಷಿ ಅಧಿಕಾರಿಗಳಿಂದ ಅಗತ್ಯ ಸಲಹೆ ಸೂಚನೆಯನ್ನು ಪಡೆಯುವುದಿಲ್ಲ. ಇದರಿಂದ ಹೆಚ್ಚಿನ ಇಳುವರಿಯನ್ನು ಪಡೆಯುವಲ್ಲಿ ಹಿನ್ನಡೆಯಾಗುತ್ತಿದೆ. ಆದ್ದರಿಂದ ಕೃಷಿ ತಜ್ಞರ ಸಲಹೆಯನ್ನು ಪಡೆದುಕೊಳ್ಳಬೇಕು. ಬೆಳೆಗಳಿಗೆ ಅನುಗುಣವಾಗಿ ಸೂಕ್ತ ಔಷಧವನ್ನು ನಿಗದಿತ ಪ್ರಮಾಣದಲ್ಲಿ ನೀಡಬೇಕು. ಇದರಿಂದ ಉತ್ತಮ ಇಳುವರಿಯನ್ನು ಪಡೆದು ಲಾಭ ಗಳಿಸಬೇಕು ಎಂದು ತಿಳಿಸಿದರು. ಇದೇ ವೇಳೆ ಬೀಜೋಪಚಾರದ ಬಗ್ಗೆ ರೈತರಿಗೆ ಮಾಹಿತಿ ತಿಳಿಸಲಾಯಿತು.

ಕೃಷಿ ಅಧಿಕಾರಿ ವೆಂಕಟನಾಯಕ ಮಾತನಾಡಿ, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ರೈತ ಸಂಪರ್ಕ ಕೇಂದ್ರ ಮೂಲಕ ರಿಯಾಯಿತಿ ದರಲ್ಲಿ ಬಿತ್ತನೆ ಬೀಜ, ಕೃಷಿ ಸಲಕರಣೆಗಳು ಹಾಗೂ ಇನ್ನಿತರ ಸವಲತ್ತುಗಳನ್ನು ನೀಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಗ್ರಾಪಂ ಸದಸ್ಯ ಸೋಮಣ್ಣ, ರೈತ ಮುಖಂಡರಾದ ಲೂರ್ದುಸ್ವಾಮಿ, ಲೋಕೇಶ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net