

ಚಾಮರಾಜನಗರ: ವಿಶ್ವ ವಿಖ್ಯಾತ ಮೈಸೂರು ದಸರಾ ಭಾಗವಾಗಿರುವ ಚಾಮರಾಜನಗರದಲ್ಲಿ ಅ.17 ರಿಂದ 20ರವರೆಗೆ ನಾಲ್ಕು ದಿನಗಳ ಕಾಲ ಸಾಂಪ್ರದಾಯಿಕ ದಸರಾ ಮಹೋತ್ಸವನ್ನು ಆಯೋಜಿಸಲಾಗಿದ್ದು, ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಅ.17 ರ ಬೆಳಿಗ್ಗೆ 10.15 ಗಂಟೆಗೆ ಪೂಜೆ ಸಲ್ಲಿಸುವ ಮೂಲಕ ಸಾಂಪ್ರಾದಾಯಿಕವಾಗಿ ದಸರಾಗೆ ಚಾಲನೆ ನೀಡಲಾಗುತ್ತದೆ. ಬಳಿಕ ಶ್ರೀಭುವನೇಶ್ವರಿ ತಾಯಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುತ್ತದೆ. ಶ್ರೀ ಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಜಿಲ್ಲೆಯ ಚಿತ್ರಕಲಾವಿದರಿಂದ ಸ್ಥಳದಲ್ಲಿ ಚಿತ್ರಕಲೆ ಬಿಡಿಸುವ ಮೂಲಕ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 11 ಗಂಟೆಗೆ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲೆಯ ಕವಿಗಳಿಂದ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 11.15 ಗಂಟೆಗೆ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಮಹಿಳೆಯರಿಂದ ತಯಾರಿಸಿದ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಅ. 17 ರ ಮಧ್ಯಾಹ್ನ 2.30 ಗಂಟೆಗೆ ಶ್ರೀ ಚಾಮುಂಡೇಶ್ವರಿ ವಿಗ್ರಹದೊಂದಿಗೆ ದಸರಾ ಮೆರವಣಿಗೆಗೆ ಜಿಲ್ಲೆಯ ವಿವಿಧ ಕಲಾತಂಡಗಳು, ವಿವಿಧ ಇಲಾಖೆಗಳ ಸ್ಥಬ್ದಚಿತ್ರಗಳ (ಟ್ಯಾಬ್ಲೋ) ಪ್ರದರ್ಶನದ ಮೂಲಕ ಚಾಲನೆ ನೀಡಲಾಗುವುದು. ಸಂಜೆ 5.30 ಗಂಟೆಗೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ಪ್ರಧಾನ ವೇದಿಕೆಯಲ್ಲಿ ವಿದ್ಯುಕ್ತವಾಗಿ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯಾಗಲಿದೆ. ಈ ವೇದಿಕೆಯಲ್ಲಿಯೇ ಪ್ರಮುಖ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗಿದ್ದು, ವಿಶೇಷವಾಗಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.
ವೈವಿಧ್ಯಮಯ ಕಾರ್ಯಕ್ರಮಗಳು:
ಚಾ.ನಗರ ದಸರಾ ಮಹೋತ್ಸವ ಅಂಗವಾಗಿ ಶ್ರೀ ಚಾಮರಾಜೇಶ್ವರಸ್ವಾಮಿ ದೇವಾಲಯ ಮುಂಭಾಗದ ಪ್ರಧಾನ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ದಸರಾ ಕವಿಗೋಷ್ಠಿ, ಪೌರಾಣಿಕ, ಸಾಮಾಜಿಕ ನಾಟಕಗಳ ಪ್ರದರ್ಶನ ಇರಲಿವೆ. ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲೆಯ ವಿವಿಧ ಮಹಿಳಾ ಸಂಘ ಸಂಸ್ಥೆಗಳು, ಗಿರಿಜನ ಹಾಡಿಗಳಿಂದ ತಯಾರಾಗಿರುವ ಅರಣ್ಯ ಉತ್ಪನ್ನಗಳು, ವಿವಿಧ ಆಹಾರ ಉತ್ಪನ್ನಗಳು, ಕಸೂತಿ, ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಏರ್ಪಾಡಾಗಿದೆ. ರೈತ ದಸರಾ, ಮಹಿಳಾ ದಸರಾ, ಮ್ಯಾರಾಥಾನ್, ಚಾಮುಂಡೇಶ್ವರಿ ವಿಗ್ರಹದೊಂದಿಗೆ ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ಸೇರಿದಂತೆ ಇತರೆ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ.
ಅ.18 ರಂದು ದಸರಾ ಮ್ಯಾರಾಥಾನ್:
ಶ್ರೀ ಚಾಮರಾಜೇಶ್ವರಸ್ವಾಮಿ ದೇವಾಲಯ ಮುಂಭಾಗ ಅ. 18ರಂದು ಬೆಳಿಗ್ಗೆ 6.30 ಗಂಟೆಗೆ ದಸರಾ ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು, ಹಿರಿಯರು, ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಚಾಮರಾಜೇಶ್ವರ ದೇವಾಲಯದಿಂದ ಹೊರಟು ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗಿ ಪ್ರವಾಸಿ ಮಂದಿರದಲ್ಲಿ ಮ್ಯಾರಥಾನ್ ಕೊನೆಗೊಳ್ಳಲಿದೆ. ಅದೇ ದಿನ 10.30 ಗಂಟೆಗೆ ಮಹಿಳಾ ದಸರಾ ಕಾರ್ಯಕ್ರಮ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ನಡೆಯಲಿದೆ. 11 ಗಂಟೆಗೆ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಾಟಕೋತ್ಸವ ಕಾರ್ಯಕ್ರಮವನ್ನು ಜಿಲ್ಲೆಯ ರಂಗಭೂಮಿ ಕಲಾವಿದರಿಂದ ಆಯೋಜಿಸಲಾಗಿದೆ.
ರೈತರೊಂದಿಗೆ ಸಂವಾದ:
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅ.19 ರಂದು ರೈತ ದಸರಾ ಅಂಗವಾಗಿ ರಾಜ್ಯದ ಪ್ರಗತಿಪರ ರೈತರಿಂದ ಸಂವಾದ, ಚಿಂತನಾ ಮಂಥನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶ್ರೀಚಾಮರಾಜೇಶ್ವರ ದೇವಸ್ಥಾನದ ಮೂಂಭಾಗ ಬೆಳಿಗ್ಗೆ 10 ಗಂಟೆಗೆ ಎತ್ತಿನಗಾಡಿ ಹಾಗೂ ಕಲಾತಂಡಗಳ ಮೆರವಣಿಗೆ ಹೊರಟು ಬಿ. ರಾಚಯ್ಯ ಜೋಡಿರಸ್ತೆ ಮೂಲಕ ಸಾಗಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೊನೆಗೊಳ್ಳಲಿದೆ. ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರೈತ ದಸರಾ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ವೈಭವ:
ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಮುಖ್ಯ ವೇದಿಕೆಯಲ್ಲಿ ಅ. 17ರಿಂದ 20ರವರೆಗೆ ಮಧ್ಯಾಹ್ನ 2ರಿಂದ ರಾತ್ರಿ 9.45 ಗಂಟೆಯವರೆಗೆ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ. ಸುಗಮ ಸಂಗೀತ, ಜನಪದ ಸಂಗೀತ, ಕನ್ನಡ ಗೀತೆಗಳ ಗಾಯನ, ತಂಬೂರಿ ಪದ, ನೀಲಗಾರರ ಪದ, ವಚನ ಗಾಯನ, ಭಜನೆ, ತತ್ವಪದ, ಸೋಬಾನೆ ಪದ, ನೃತ್ಯ ರೂಪಕ, ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಅ. 20ರಂದು ಸಂಜೆ 7ಗಂಟೆಗೆ ದಸರಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ.
ಜಗಮಗಿಸಲಿದೆ ದೀಪಾಲಂಕಾರ:
ನಗರದ ಹೃದಯ ಭಾಗದಲ್ಲಿರುವ ಹಾಗೂ ಮುಖ್ಯ ವೇದಿಕೆ ಕಾರ್ಯಕ್ರಮಗಳು ನಡೆಯಲಿರುವ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ, ಪ್ರಮುಖ ರಸ್ತೆಗಳು ದೀಪಾಲಂಕಾರದಿಂದ ಜಗಮಗಿಸಲಿದೆ. ಜಿಲ್ಲಾಡಳಿತ ಭವನ, ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರ, ವಿವಿಧ ಸರ್ಕಾರಿ ಕಟ್ಟಡಗಳು, ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ದೀಪಾಲಂಕಾರ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದ್ದು ದಸರಾ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈ ಬಾರಿ ಚಾಮರಾಜನಗರ ದಸರಾಗೆ ದಶಕದ ಸಂಭ್ರಮವಾಗಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ವರ್ಷದ ದಸರಾ ಮಹೋತ್ಸವವನ್ನು ಸರಳವು ಅಲ್ಲದ, ಅದ್ದೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾ ನಡೆಸಲಾಗುತ್ತಿದೆ. ಜಿಲ್ಲೆಗೆ 1 ಕೋಟಿ ರೂ. ಅನುದಾನ ನೀಡಲು ಸರ್ಕಾರ ಆದೇಶಿಸಿದೆ. ಹೆಚ್ಚಿನ ಅನುದಾನ ಕೊಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ.-ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ.