ಭೀಮನ ಅಮಾವಾಸ್ಯೆ ವಿಶೇಷ ಪೂಜೆ

17raju2
Published on

ಚಾಮರಾಜನಗರ: ಭೀಮನ ಅಮಾವಾಸ್ಯೆ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿತು.

ತಾಲೂಕಿನ ಕುಡ್ಲೂರು ಗ್ರಾಮದ ಶ್ರೀ ಮಂಟೇಸ್ವಾಮಿ ಹಾಗೂ ಶ್ರೀ ಮಹದೇಶ್ವರ ದೇವಸ್ಥಾನ, ಯಡಬೆಟ್ಟದ ಶ್ರೀಮಹದೇಶ್ವರ, ಚಂದಕವಾಡಿಯ ಶ್ರೀಲಕ್ಷ್ಮೀದೇವಿ ದೇವಸ್ಥಾನ, ಶಂಕರದೇವನ ಬೆಟ್ಟದ ಶ್ರೀಶಂಕರೇಶ್ವರಸ್ವಾಮಿ ದೇವಸ್ಥಾನ, ಸಂತೇಮರಹಳ್ಳಿಯ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ, ಕೊಂಗಳ್ಳಿ ಬೆಟ್ಟದ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ಎಣ್ಣೆಹೊಳೆಯ ಶ್ರೀಮಹದೇಶ್ವರಸ್ವಾಮಿ ದೇವಾಲಗಳಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಾವಿರಾರು ಭಕ್ತಾಧಿಗಳು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು,ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ದರ್ಶನ ಪಡೆದುಕೊಂಡರು.

ಆಷಾಢಮಾಸದಲ್ಲಿ ಯಾವುದೇ ಶುಭ ಕಾರ್ಯಗಳಲ್ಲಿ ಭಾಗಿಯಾಗದ ಹೆಚ್ಚಿನ ಜನರು, ಆಷಾಢದ ಭೀಮನ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ಸಡಗರದಿಂದ ಆಚರಿಸುತ್ತಾರೆ. ತಮ್ಮ ಪತಿಗೆ ಆಯಸ್ಸು, ಆರೋಗ್ಯ ಕರುಣಿಸುವಂತೆ ವಿಶೇಷವಾಗಿ ಭೀಮನ ಅಮಾವಾಸ್ಯೆಯ ದಿನ ಪ್ರಾರ್ಥಿಸುತ್ತಾರೆ, ಈ ಸಂದರ್ಭದಲ್ಲಿ ಹತ್ತಿರದ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈಗಾಗಿ ದೇವಸ್ಥಾನಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು, ದೇವಸ್ಥಾನಗಳು ಜನರಿಂದ ತುಂಬಿತುಳುಕುತ್ತಿತ್ತು. ಭಕ್ತಾಧಿಗಳು ಕುಟುಂಬ ಸಮೇತರಾಗಿ ಭೇಟಿ ನೀಡುತ್ತದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಹಲವು ದೇವಾಲಯಗಳಲ್ಲಿ ನೆರೆದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಮರಳ್ಳಿ ಮಾದಪ್ಪನಿಗೂ ವಿಶೇಷ ಪೂಜೆ:
ಸಂತೇಮರಹಳ್ಳಿಯ ಶ್ರೀಮಹದೇಶ್ವರ ದೇವಸ್ಥಾನದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಮುಂಜಾನೆಯಿಂದಲೇ ದೇವಾಲಯದಲ್ಲಿ ವಿವಿಧ ಅಭಿಷೇಕ, ಪೂಜೆಯನ್ನು ನಡೆಸಿ, ಮಹಾಮಂಗಳಾರತಿಯೊಂದಿಗೆ ಹುಲಿವಾಹನೋತ್ಸವ ನಡೆಸಲಾಯಿತು. ತದನಂತರ ವಿವಿಧ ಗ್ರಾಮಗಳಿಂದ ಭಕ್ತಾಧಿಗಳು ಹಾಗೂ ಹಲವು ರಾಜಕೀಯ ಮುಖಂಡರು ಭೇಟಿ ನೀಡಿ ದೇವರ ದರ್ಶನ ಪಡೆದರು. ಜಾತ್ರೆಯಲ್ಲಿ ಪೂಜಾ ಸಾಮಗ್ರಿ ಹಾಗೂ ಆಟಿಕೆ ವಸ್ತುಗಳು ಸೇರಿದಂತೆ ಇನ್ನಿತರೆ ವ್ಯಾಪಾರ ಜೋರಾಗಿ ನಡೆಯಿತು. ದೇವಸ್ಥಾನಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಕೂಡ್ಲೂರಿನಲ್ಲೂ ಜನಜಂಗುಳಿ:
ಭೀಮನ ಅಮಾವಾಸ್ಯೆ ಪ್ರಯುಕ್ತ ಇತಿಹಾಸ ಪ್ರಸಿದ್ಧ ಕುಡ್ಲೂರು ಗ್ರಾಮದ ಶ್ರೀ ಮಂಟೇಸ್ವಾಮಿ ಆದಿಮಠ, ಶ್ರೀಮಹದೇಶ್ವರ ದೇವಸ್ಥಾನ, ಗಣಪತಿ ದೇವಾಲಯ ಹಾಗೂ ಶ್ರೀರಾಕಸಮ್ಮನ ದೇವಸ್ಥಾನಗಳಲ್ಲಿ ಜನಜಂಗುಳಿ ಉಂಟಾಯಿತು. ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸಾವಿರಾರು ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನಪಡೆದರು. ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಚಕ ಸತ್ಯಪ್ಪ, ಶ್ರೀಧರ್, ದೇವರ ಗುಡ್ಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net