

ಚಾಮರಾಜನಗರ: ಕೋವಿಡ್-19 ಸೋಂಕಿನಿಂದ ಬಲಿಯಾದ ವ್ಯಕ್ತಿಯನ್ನು ಪಿಎ್ಐ ಕಾರ್ಯಕರ್ತರು ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಯಲ್ಲಿ ಕರೊನಾದಿಂದ ಮೃತಪಟ್ಟ ಕೊಂಗರಹಳ್ಳಿಯ 58 ವರ್ಷದ ವ್ಯಕ್ತಿಯನ್ನು ಜಿಲ್ಲಾಡಳಿತ ಕೋವಿಡ್-19ನಿಂದ ಮೃತರಾದವರ ಅಂತ್ಯ ಸಂಸ್ಕಾರಕ್ಕೆ ನಿಗದಿಪಡಿಸಿರುವ ಸ್ಥಳದಲ್ಲಿ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.
ಶವವನ್ನು ಹೂಳುವ ವೇಳೆ ಆರೋಗ್ಯ ಇಲಾಖೆ ನೀಡಿದ್ದ ಪಿಪಿಇ ಕಿಟ್‌ಗಳನ್ನು ಧರಿಸಿಕೊಂಡು, ಹೂಳುವ ಸ್ಥಳದ ಸುತ್ತಲೂ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿ, 8 ಅಡಿ ಅಳಕ್ಕೆ ತೆಗೆದಿದ್ದ ಗುಂಡಿಯಲ್ಲಿ ಹಗ್ಗದ ಸಹಾಯದ ಮೂಲಕ ಮೃತದೇಹವನ್ನು ಇಳಿಸಿ, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಸಂಸ್ಕಾರ ಮಾಡಿದ್ದಾರೆ.
ಕರೊನಾ ಸೋಂಕಿನಿಂದ ಬಲಿಯಾದವರನ್ನು ಅಂತ್ಯ ಸಂಸ್ಕಾರ ಮಾಡಲು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವುದಾಗಿ ಜಿಲ್ಲಾಡಳಿತಕ್ಕೆ ಮನವಿಯನ್ನು ಕೂಡ ಸಲ್ಲಿಸಿದ್ದರು.
ಅಂತ್ಯ ಸಂಸ್ಕಾರಕ್ಕೆ ತರಬೇತಿ: ಕೋವಿಡ್-19 ನಿಂದ ಮೃತರಾದವರನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲು ಮುಂದಾದ 20 ಜನ ಪಿಎ್ಐ ಕಾರ್ಯಕರ್ತರು ಆರೋಗ್ಯ ಇಲಾಖೆಯಿಂದ ಎಲ್ಲ ರೀತಿ ತರಬೇತಿಯನ್ನು ಪಡೆದುಕೊಂಡಿದ್ದರು.
ಶವವನ್ನು ಹೂಳುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಸ್ಯಾನಿಟೈಸರ್ ಬಳಸುವುದು, ಪಿಪಿಇ ಕಿಟ್‌ಗಳನ್ನು ಧರಿಸುವುದರ ಬಗ್ಗೆ, ಪ್ರಾಯೋಗಿಕವಾಗಿ ತರಬೇತಿ ಪಡೆದಿದ್ದರು. ಅದರಂತೆ ಅಂತ್ಯ ಸಂಸ್ಕಾರ ಮುಗಿಸಿ ಬಳಿಕ ಭಾಗವಹಿಸಿದ್ದ ಎಲ್ಲ ಸ್ವಯಂ ಸೇವಕರು ತಾವೇ ಸ್ವಯಂ ಹೋಂ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ.
ಕೋವಿಡ್-19 ನಿಂದ ಮೃತರಾದವರನ್ನು ಗೌರವಯುತವಾಗಿ ಹೂಳದೆ ಎಳೆದು ಬಿಸಾಡುವುದು ಅಮಾನವೀಯ ಕೃತ್ಯವಾಗಿದೆ. ಯಾವುದೇ ಜಾತಿ, ಧರ್ಮದವರಾಗಲಿ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುವುದು ಧರ್ಮ. ಆದ್ದರಿಂದ ನಮ್ಮ ಸಂಘಟನೆಯ ಕಾರ್ಯಕರ್ತರು ಸ್ವಯಂ ಸೇವಕರಾಗಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ರಾಜ್ಯದ ವಿವಿಧ ಕಡೆಗಳಲ್ಲೂ ನಮ್ಮ ಸಂಘಟನೆಯ ಕಾರ್ಯ ಕರ್ತರು ಈ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ತೊಡಗಿಸಿಕೊಂಡಿದ್ದಾರೆ.
ಕಫಿಲ್ ಅಹಮ್ಮದ್, ಪಿಎ್ಐ ಜಿಲ್ಲಾಧ್ಯಕ್ಷ, ಚಾಮರಾಜನಗರ.