ಜನರಲ್ಲಿ ಭೀತಿ ಹುಟ್ಟಿಸಿರುವ ಅಪರಿಚಿತ

18-GPT-3A
Published on

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಮದ್ದೂರು ವಲಯಾರಣ್ಯ ಕಚೇರಿ ಬಳಿ ಅಪರಿಚಿತ ಯುವಕನೊಬ್ಬ ಕಳೆದ 20 ದಿನಗಳಿಂದಲೂ ಮಲಗಿದ್ದು, ಕಾಡಂಚಿನ ಗ್ರಾಮಗಳ ಸಾರ್ವಜನಿಕರ ಭೀತಿಗೆ ಕಾರಣನಾಗಿದ್ದಾನೆ.
ಸುಲ್ತಾನ್ ಭತ್ತೇರಿ ರಸ್ತೆಯ ಮದ್ದೂರು ಕಗ್ಗಳದಹುಂಡಿ ಬದಿ ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ಯುವಕ ಎರಡು ಭಾರಿ ಗಾತ್ರದ ಬ್ಯಾಗುಗಳನ್ನು ತಲೆದಿಂಬಾಗಿಸಿಕೊಂಡು ಮಲಗಿದ್ದಾನೆ. ಈತನಿಗೆ ಊಟ ತಿಂಡಿಯನ್ನೂ ಕೊಡುವವರಿಲ್ಲದಿದ್ದರೂ ಎತ್ತಲೂ ಹೋಗದೆ ಮಲಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೆ, ‘ಆತ ರಸ್ತೆಯ ಬದಿಯಲ್ಲಿರುವುದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎನ್ನುತ್ತಿದ್ದಾರೆ. ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರೂ ಯಾವುದೇ ಉಪಯೋಗವಾಗಿಲ್ಲ. ಕೇರಳ ರಾಜ್ಯದ ಗಡಿಯಲ್ಲಿ ಆಗಾಗ ಮತಿವಿಕಲರು ಓಡಾಡುತ್ತಿದ್ದರೂ ಇಷ್ಟು ದೀರ್ಘ ಕಾಲ ಯಾರೂ ಒಂದೆಡೆ ಉಳಿದಿಲ್ಲ. ಮಳೆ, ಗಾಳಿ, ಚಳಿ ಬಿಸಿಲನ್ನೂ ಲೆಕ್ಕಿಸದೆ ಮಲಗಿರುವ ಯುವಕನ ಬಳಿ ಹೋಗಲು ಸ್ಥಳೀಯರೂ ಭಯಪಡುತ್ತಿದ್ದಾರೆ. ಜಮೀನುಗಳಿಗೆ ಹೋಗುವ ರೈತರು ಬಳಸುಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟವರು ಯುವಕನ ಬಗ್ಗೆ ವಿಚಾರಿಸಿ ಆತನ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬೇಕು ಎಂದು ಕಗ್ಗಳದಹುಂಡಿ ಗ್ರಾಮಸ್ಥರಾದ ಮಂಜಪ್ಪ, ಗಂಗಾಧರ ಹಾಗೂ ಮಹದೇವಪ್ಪ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು, ರಸ್ತೆ ಬದಿ ಮಲಗಿರುವ ಯುವಕನನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪೊಲೀಸರಿಗೆ ತಿಳಿಸಲಾಗುವುದು ಎಂದು ತಹಸೀಲ್ದಾರ್ ನಂಜುಂಡಯ್ಯ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net