

ಕೊಳ್ಳೇಗಾಲ: ಪಟ್ಟಣದಲ್ಲಿ ಪ್ರಸನ್ನ ಶ್ರೀ ವಿಶಾಲಾಕ್ಷೀ ಸಮೇತ ಶ್ರೀ ವಿಶ್ವನಾಥ ಸ್ವಾಮಿಯ ದಿವ್ಯ ಬ್ರಹ್ಮರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಅರಕೊಟಾರಂ ಬಂಗಾರಶೆಟ್ಟರ ದೇವಾಲಯದ ಮುಂಭಾಗದಲ್ಲಿ ಅಲಂಕೃತಗೊಂಡಿದ್ದ ರಥದ ಮೇಲೆ ವಿಶಾಲಾಕ್ಷಿ ಸಮೇತ ಶ್ರೀ ವಿಶ್ವನಾಥಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥದ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ರಥವನ್ನು ಭಕ್ತರು ಎಳೆಯುವ ಮೂಲಕ ರಥೋತ್ಸವ ಜರುಗಿತು. ದೇವಾಲಯದಲ್ಲಿ ಮುಂಜಾನೆಯಿಂದ ಶಿವಯಾಗ, ಏಕವಾರ ರುದ್ರಾಭೀಷೇಕ, ಅಭಿಷೇಕ, ಗಣಪತಿ ಹೋಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಬಳಿಕ ರಥಸಂಪ್ರೋಸಕ್ಷಣೆ, ರಥಕ್ಕೆ ಬಲಿ ಪೂಜೆ, ವಾಸ್ತು ಬೀದಿ ಬಲಿಪೂಜೆ ನಡೆಸಿ ಸ್ವಾಮಿಗೆ ಹೂವಿನ ಅಲಂಕರ ಮಾಡಲಾಯಿತು.
ರಥೋತ್ಸವದ ನಂತರ ನೆರೆದಿದ್ದ ಎಲ್ಲ ಭಕ್ತರಿಗೂ ದೇವಸ್ಥಾನದ ಆವರಣದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಯಿತು. ಇಂದಿನ ಎಲ್ಲ ಪೂಜಾ ಕೈಂಕರ್ಯವನ್ನು ಪ್ರಧಾನ ಆಗಮಿಕರಾದ ಆನಂದ ದೀಕ್ಷಿತರು, ಪಶುಪತಿಶರ್ಮ, ನಟರಾಜಶರ್ಮ, ಕುಮಾರಸ್ವಾಮಿ ಶರ್ಮ, ಪ್ರಧಾನ ಅರ್ಚಕರಾದ ಜ್ಯೋತಿಷಿ ಕೃಷ್ಣಕುಮಾರ ಶರ್ಮ, ಸೋಮಶೇಖರ ಶರ್ಮ ನಡೆಸಿಕೊಟ್ಟರು.
ರಥೋತ್ಸವದಲ್ಲಿ ವಿಶ್ವನಾಥಸ್ವಾಮಿ ದೇವಸ್ಥಾನ ಸಂಸ್ಥೆಯ ಪದಾಧಿಕಾರಿಗಳು, ಮ್ಯಾನೇಜಿಂಗ್ ಟ್ರಸ್ಟಿಗಳಾದ ನಾಗಪ್ರಕಾಶ್, ಸತೀಶ್‌ಕುಮಾರ್, ಪರಮೇಶ್ವರಯ್ಯ, ವೇಣುಗೋಪಾಲ್, ಚಂದ್ರಶೇಖರ (ಶೇಖರ), ಮಹದೇವಯ್ಯ, ಚೆನ್ನವೀರಶೆಟ್ಟಿ ಇತರರಿದ್ದರು.