

ಹನೂರು: ಪಟ್ಟಣದ ಡಾಲರ್ಸ್ ಕಾಲನಿಯಲ್ಲಿ ಸೋಮವಾರ ತಡರಾತ್ರಿ ಮನೆಯೊಂದರ ಬೀಗ ಮುರಿದು ಚಿನ್ನಾಭರಣ ಕಳವು ಮಾಡಲಾಗಿದೆ. ಶಾಸಕ ಆರ್. ಮಂಜುನಾಥ್ ಮನೆ ಸಮೀಪವೆ ಕಳವು ನಡೆದಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.
ತಮಿಳುನಾಡು ಮೂಲದ ದಿಂಡಿಗಲ್‌ನ ವಟ್ಟನ್ ಛತ್ರ ಗ್ರಾಮದ ಚಿನ್ನದೊರೆ ಎಂಬುವರು ಹನೂರಿನ ಡಾಲರ್ಸ್ ಕಾಲನಿಯಲ್ಲಿ ನೆಲೆಸಿದ್ದರು. ಇವರು ನಾಲ್ಕು ದಿನಗಳ ಹಿಂದೆ ಮದುವೆ ಸಮಾರಂಭಕ್ಕೆ ಕುಟುಂಬಸ್ಥರೆಲ್ಲರೂ ಮನೆಗೆ ಬೀಗ ಹಾಕಿ ತಮಿಳುನಾಡಿಗೆ ಹೋಗಿದ್ದರು. ಇದನ್ನರಿತ ಖದೀಮರು ಸೋಮವಾರ ತಡರಾತ್ರಿ ಬೀಗ ಮುರಿದು 20 ಲಕ್ಷ ರೂ. ನಗದು, 308 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಚಾಲಾಕಿ ಖದೀಮರು ಕಳವು ಮಾಡುವ ಮೊದಲ ಕಟ್ಟಡದ ಮೇಲಿದ್ದ ಮೇಲಂತಸ್ತಿನ ನಾಲ್ಕು ಮನೆಗಳ ಚಿಲಕ ಹಾಕಿ ನೆಲಮಹಡಿಯಲ್ಲಿದ್ದ ಚಿನ್ನದೊರೆ ಮನೆಯಲ್ಲಿ ಕಳವು ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಸುತ್ತಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರ ತಂಡ ಮಾದರಿ ಸಂಗ್ರಹಿಸಿತು. ಚಿನ್ನದೊರೆ ನೀಡಿದ ದೂರಿನ ಮೇರೆಗೆ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಕಳವಾದ ಮನೆಗೆ ಭೇಟಿ ನೀಡಿ ಇನ್ಸ್‌ಪೆಕ್ಟರ್ ಶಶಿಕುಮಾರ್ ಹಾಗೂ ಕುಟುಂಬಸ್ಥರಿಂದ ಮಾಹಿತಿ ಪಡೆದರು. ಪ್ರಕರಣದ ತನಿಖೆ ಕೈಗೆತ್ತಿಗೊಂಡಿದ್ದು, ಖದೀಮರನ್ನು ಪತ್ತೆಹಚ್ಚಲಾಗುವುದು. ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ದಾಳಿ ನಡೆಸಿ 154 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಕರ್ತವ್ಯ ನಿರ್ಲಕ್ಷೃವಹಿಸಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ನಾಲ್ವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.