

ಗುಂಡ್ಲುಪೇಟೆ: ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು, ಬೆಳೆ ನಷ್ಟಪರಿಹಾರ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಪಟ್ಟಣದ ತಾಲೂಕು ಕಚೇರಿ ಎದುರು ಹಸಿರು ಸೇನೆ ಹಾಗೂ ರಾಜ್ಯ ರೈತಸಂಘದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಗಿದೆ.
ಹಸಿರು ಸೇನೆ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ತಾಲೂಕು ಅಧ್ಯಕ್ಷ ದಿಲೀಪ್ ನೇತೃತ್ವದಲ್ಲಿ ಪ್ರತಿಭಟನಾಕಾರರು ರೈತರನ್ನು ಭೇಟಿ ಮಾಡಿದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಕ್ಷೇತ್ರ ಪರಿಶೀಲನೆ ಮಾಡದೆ ಕಚೇರಿಯಲ್ಲಿಯೇ ಕುಳಿತು ವರದಿ ನೀಡುತ್ತಿದ್ದೀರಿ. ಇದರಿಂದ ಕಳೆದ ವರ್ಷ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಆರು ತಿಂಗಳಾದರೂ ರೈತರಿಗೆ ಇನ್ನೂ ಪರಿಹಾರ ದೊರಕಿಲ್ಲ. ಗಾಳಿ ಮಳೆಗೆ ಬಾಳೆ ಮುಂತಾದ ತೋಟಗಾರಿಕೆ ಬೆಳೆಗಳು ನಾಶವಾಗಿದ್ದರೂ ಪರಿಹಾರ ನೀಡಿಲ್ಲ. ಅಲ್ಲದೆ, ನದಿ ಮೂಲದಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸದೆ ಅಂತರ್ಜಲ ಮಟ್ಟದಲ್ಲಿ ಕುಸಿತವುಂಟಾಗಿದೆ. ಆದ್ದರಿಂದ, ಕೂಡಲೇ ರೈತರಿಗೆ ಬೆಳೆನಷ್ಟಕ್ಕೆ ಪರಿಹಾರ ನೀಡುವ ಜತೆಗೆ ಕೆರೆಗಳಿಗೆ ನೀರು ತುಂಬಿಸುವವರೆಗೂ ಪ್ರತಿಭಟನೆ ಮುಂದುವರೆಸಲಾಗುವುದು. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಪರಿಹಾರ ನೀಡದಿದ್ದರೆ ನಾಳೆಯಿಂದ ಎತ್ತುಗಾಡಿ, ಸಾಕುಪ್ರಾಣಿಗಳ ಜತೆಗೂಡಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಧ್ಯಾಹ್ನ ತಾಲೂಕು ಕಚೇರಿ ಎದುರು ಉಪಹಾರ ತಯಾರಿಸುವ ಮೂಲಕ ತಮ್ಮ ಬೆಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರೆಸುವ ನಿರ್ಧಾರಕ್ಕೆ ಕೈಗೊಂಡಿದ್ದಾರೆ.