

ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕಿನಾದ್ಯಂತ ಸೋಮವಾರವೂ ಉತ್ತಮ ಮಳೆಯಾಗಿದೆ. ಭಾನುವಾರ ಮಳೆಯಾಗಿದ್ದರಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಚರಂಡಿ ನೀರು ತುಂಬಿ ಹರಿದ ಪರಿಣಾಮ ಸಂಚಾರಕ್ಕೆ ತೊಂದರೆ ಆಯಿತು.
ತಾಲೂಕು ವ್ಯಾಪ್ತಿಯ ಟಗರಪುರ, ಕುಂತೂರು, ಸತ್ತೇಗಾಲ, ಪಾಳ್ಯ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿತ್ತು. ಕೊಳ್ಳೇಗಾಲ ಪಟ್ಟಣದಲ್ಲಿ ಮಧ್ಯಾಹ್ನ 2.15 ಗಂಟೆ ಶುರುವಾದ ಮಳೆ 1 ಗಂಟೆ ಜೋರಾಗಿ ಸುರಿಯಿತು. ನಂತರ ಕೆಲ ಸಮಯ ವಿರಾಮ ನೀಡಿತು. ಮತ್ತೆ ಮಧ್ಯಾಹ್ನ 4.30ಕ್ಕೆ ಪ್ರಾರಂಭವಾಗಿ 3 ಗಂಟೆಗೂ ಹೆಚ್ಚು ಕಾಲ ಸುರಿಯಿತು.
ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ , ಡಾ.ರಾಜ್ ಕುಮಾರ್ ರಸ್ತೆಗಳಲ್ಲಿ ಮಳೆ ನೀರು ತುಂಬಿ ಸಂಚಾರಕ್ಕೆ ತೊಂದರೆ ಆಯಿತು. ಅಂಬೇಡ್ಕರ್ ರಸ್ತೆಯಲ್ಲಿರುವ ಹಳೆ ಅಂಚೆ ಕಚೇರಿ ಮುಂಭಾಗದ ಚರಂಡಿ ತುಂಬಿ ನೀರು ರಸ್ತೆಯಲ್ಲಿ ಹರಿಯಿತು. ಸರ್ಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕೆಲಸ ಮುಗಿಸಿ ಮನೆಗೆ ತೆರಳಲು ಪರದಾಡುವಂತಾಯಿತು. ಪಾಪನಕೆರೆ, ಕೊಂಗಳಕೆರೆ, ತಟ್ಟಕೆರೆಯಲ್ಲಿ ಚಿಕ್ಕರಂಗನಾಥ ಕೆರೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.