

ಕೊಳ್ಳೇಗಾಲ: ಕುರಿ, ಮೇಕೆ ಸಾಕಣೆಗೆ ಚಾಮರಾಜನಗರ ಜಿಲ್ಲೆ ಪೂರಕವಾದ ಸ್ಥಳವಾಗಿದೆ. ಈ ಉದ್ಯಮದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ವರಾಹ ಅಭಿವೃದ್ಧಿ ಯೋಜನೆ ಉಪನಿರ್ದೇಶಕ ಡಾ.ಶಿವಲಿಂಗಯ್ಯ ಹೇಳಿದರು.
ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಸಿಡಿಎಸ್ ಭವನದಲ್ಲಿ ಗಂಗಾ ಚಾರಿಟಬಲ್ ಟ್ರಸ್ಟ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಪಶು ಸಂಗೋಪನೆ ಇಲಾಖೆ ಸಹಯೋಗದಲ್ಲಿ ಕುರಿ ಮತ್ತು ಮೇಕೆ ಸಾಕಣೆಗೆ ಮತ್ತು ಮೇವು ನಿರ್ವಹಣೆ ಕುರಿತು ಮಂಗಳವಾರ ಆಯೋಜಿಸಿದ್ದ ಎರಡು ದಿನದ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವ್ಯವಸಾಯವನ್ನು ಅಪ್ಪ ಹಾಕಿದ ಆಲದ ಮರದಂತೆ ಕಾಣುತ್ತಿದ್ದೇವೆ. ಪ್ರಸ್ತುತ ಪರಿಸ್ಥಿತಿ ಬೆಲೆ ಇದ್ದಾಗ ಬೆಳೆ ಬರುವುದಿಲ್ಲ, ಬೆಳೆ ಇದ್ದಾಗ ಬೆಲೆ ಇರುವುದಿಲ್ಲದಂತೆ ಆಗಿದೆ. ಇವೆರಡೂ ಇದ್ದಾಗ ದಲ್ಲಾಳಿಗಳ ಹಾವಳಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಕುರಿ, ಮೇಕೆ ಸಾಕಣೆಗೆ ಜನರು ಒತ್ತು ನೀಡಬೇಕು. ಗಂಗಾ ಚಾರಿಟಬಲ್ ಟ್ರಸ್ಟ್ ಕಳೆದ 4 ವರ್ಷಗಳಿಂದ ಕುರಿ, ಮೇಕೆ ಸಾಕಣೆ ಹಾಗೂ ಟೈಲರಿಂಗ್ ತರಬೇತಿ ನೀಡುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಗಂಗಾ ಚಾರಿಟಬಲ್ ಸಂಸ್ಥೆ 4 ವರ್ಷಗಳಿಂದ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಕುರಿ, ಮೇಕೆ, ಸಾಲ ಸೌಲಭ್ಯ, ಉದ್ಯೋಗ ಅವಕಾಶ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕೋವಿಡ್ ನಂತರ ದೇಶದ ಆರ್ಥಿಕ ಸ್ಥಿತಿ ಹದಗಟ್ಟಿದೆ. ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇದೆ. ಜೀವನ ನಡೆಸಲು ಉದ್ಯೋಗ ಅತ್ಯಗತ್ಯವಾಗಿದೆ. ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್ ಕಾಮಯ್ಯ, ಕಾರ್ಯದರ್ಶಿ ದಿವ್ಯಶ್ರೀ, ಕೃಷಿ ಇಲಾಖೆ ನಿವೃತ್ತ ನಿರ್ದೇಶಕ ಶಿವರಾಮೇಗೌಡ, ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಮೂರ್ತಿ, ಯಳಂದೂರಿನ ಪಶು ವ್ಯೆದ್ಯಾಧಿಕಾರಿ ಡಾ.ಶಿವರಾಜ್, ಡಾ.ಗಂಗಾಧರ್, ಶಿವಾನಂದ್, ರೈತ ಮುಖಂಡ ಅರುಣ್‌ಕುಮಾರ್, ನಾರಾಯಣ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ಉತ್ಪಾದಕ ಕಂಪನಿಯ ಭಾಗ್ಯಾ ಮತ್ತಿತರಿದ್ದರು.