ಇದು ಆನೆ ಲದ್ದಿ ಸುದ್ದಿ..!

30rajesh2
Published on

ಚಾಮರಾಜನಗರ; ತಲೆಯಲ್ಲಿ ಬುದ್ಧಿ ಬದಲು ‘ಲದ್ದಿ’ ತುಂಬಿಕೊಂಡಿದ್ದೀಯಾ..? ಹೀಗಂತ ಬೈಯ್ಯುವುದು ಎಲ್ಲೆಡೆ ಸಾಮಾನ್ಯ, ಆದರೆ ದಿನಪೂರ್ತಿ ತಲೆ ತುಂಬ ‘ಲದ್ದಿ’ ಬಗ್ಗೆಯೇ ಚಿಂತೆ ತುಂಬಿಕೊಂಡು ಅದನ್ನೇ ಹುಡುಕುವುದು ಇಲ್ಲಿ ವಿಶೇಷ..!

ಈ ಸಂಗತಿ ಆನೆ ಗಣತಿ ಬಗ್ಗೆ ತಿಳಿಯದೆ ಇರುವವರ ಪಾಲಿನ ಅಚ್ಚರಿ. ಜನಗಣತಿ ಬಗ್ಗೆ ಎಲ್ಲರಿಗೂ ಅರಿವಿದೆ. ಹಾಗೆಯೇ ಗಜ ಗಣತಿ ಕುರಿತು ಪ್ರತಿಯೊಬ್ಬರಿಗೂ ಕುತೂಹಲ ಇದ್ದೇ ಇದೆ. ಈ ಗಣತಿಯಲ್ಲಿ ಆನೆ ಲದ್ದಿ ಪ್ರಮುಖವಾಗಿ ಗಣನೆಗೆ ಬರುತ್ತದೆ. ಒಂದು ದಿನವೆಲ್ಲಾ ಆನೆ ಲದ್ದಿ ಹಿಂದೆ ಬೀಳಬೇಕಾಗುತ್ತದೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳ ಅರಣ್ಯ ಪ್ರದೇಶಗಳಲ್ಲಿ ಮೇ 23ರಿಂದ 25ರವರೆಗೆ ಆನೆ ಗಣತಿ ನಡೆದಿದೆ. ಗಣತಿಗಾಗಿ ವಿವಿಧ ವಿಧಾನಗಳನ್ನು ಅನುಸರಿಸಲಾಗಿದೆ. ಇವುಗಳಲ್ಲಿ ಆನೆ ಲದ್ದಿಯನ್ನು ಆಧರಿಸಿ ಗಣತಿ ಕೈಗೊಳ್ಳುವುದೂ ಒಂದು ಬಗೆ. ಮೊದಲ ದಿನ ನೇರ ಎಣಿಕೆ, ಎರಡನೇ ದಿನ ಆನೆ ಲದ್ದಿ ಮೂಲಕ ಎಣಿಕೆ, ಮೂರನೇ ದಿನ ನೀರು ಕುಡಿಯುವ ಜಾಗದಲ್ಲಿ ಎಣಿಕೆ ನಡೆದಿದೆ. ಒಂದು ದಿನವನ್ನು ಆನೆ ಲದ್ದಿ ಪತ್ತೆಗಾಗಿಯೇ ಮೀಸಲು ಇಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳು ಹಾಕಿದ್ದ ಲದ್ದಿಯನ್ನು ಕಾಡಿನಲ್ಲಿ ಮೈಲಿಗಟ್ಟಲೆ ಅಲೆದು ಹುಡುಕಿದ್ದಾರೆ.

ಲದ್ದಿಯಲ್ಲೇನು ಹುಡುಕ್ತಾರೆ?: ಲದ್ದಿ ಮೂಲಕ ಆನೆಗಳ ಸಂಖ್ಯೆ ಲೆಕ್ಕಾಚಾರ ಹಾಕಲಾಗುತ್ತದೆ. ನಿಗದಿತ ಪ್ರದೇಶದಲ್ಲಿ ಆನೆ ಸಂಚಾರವಿರುವುದನ್ನು ಪತ್ತೆ ಹಚ್ಚಲು ಲದ್ದಿ ನೆರವಾಗುತ್ತದೆ. ಒಂದು ಕಡೆ ಬಿದ್ದ ಲದ್ದಿ, ಮತ್ತೊಂದು ಕಡೆ ಬಿದ್ದ ಲದ್ದಿಗೂ ಸ್ಥಳಾವಕಾಶವಿದ್ದರೆ ಆನೆಗಳ ಗುಂಪು ಇದೆ ಎಂದು ಪರಿಣಗಣೆಗೆ ಬರುತ್ತದೆ. ಲದ್ದಿ ಗಾತ್ರವೂ ಗುಂಪಿನಲ್ಲಿರುವ ಆನೆಗಳ ಅಂದಾಜಿಗೆ ನೆರವಾಗುತ್ತದೆ. ಹಸಿ ಲದ್ದಿ, ಒಣಗಿದ ಲದ್ದಿಯನ್ನು ಗಮನಿಸಿ ಆನೆ ಸಂಖ್ಯೆ ಅಂದಾಜಿಸಲಾಗುತ್ತದೆ. ಹಸಿ ಲದ್ದಿ ಸಿಕ್ಕಿದ್ದರೆ ಆ ಪ್ರದೇಶದಲ್ಲಿ ಆನೆಗಳ ಚಲನವಲನ ಹೆಚ್ಚಾಗಿದೆ ಎಂದರ್ಥ. ಲದ್ದಿ ಸಿಗದ ಜಾಗದಲ್ಲಿ ಆನೆಗಳ ಸಂಚಾರ ಕಡಿಮೆ ಎನ್ನಲೂಬಹುದು.

‘ಲದ್ದಿ’ ಕುರಿತ ಸುದ್ದಿಗಳು!
ಆನೆ ಲದ್ದಿ ಗಣತಿ ಕಾರ್ಯಕ್ಕೆ ಮಾತ್ರವಲ್ಲದೆ ಬೇರೆ ಕಾರಣಗಳಿಂದಲೂ ಸುದ್ದಿಯಾಗಿದೆ. ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ನಾಡಹಬ್ಬ ದಸರಾಗೆ ಬಂದಿದ್ದ ಆನೆಗಳ ಲದ್ದಿಯನ್ನು ತುಳಿದರೆ ಒಳ್ಳೆಯದಾಗುತ್ತದೆ ಎಂಬ ಮೌಢ್ಯದಿಂದ ಜನರು ಮುಗಿಬಿದ್ದಿದ್ದರು. ಮನೆಗೂ ಕೊಂಡೊಯ್ದಿದ್ದರು.

2020ರಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಮ್ಯಾನ್ ವರ್ಸಸ್ ವೈಲ್ಡ್ ಖ್ಯಾತಿಯ ಬೇರ್‌ಗ್ರಿಲ್ಸ್ ಎಪಿಸೋಡ್ ನಡೆಸಿಕೊಟ್ಟಿದ್ದರು. ಇದೇ ರೀತಿ ಬಾಲಿವುಡ್ ಚಿತ್ರನಟ ಅಕ್ಷಯ್‌ಕುಮಾರ್ ಕೂಡ ಬೇರ್‌ಗ್ರಿಲ್ಸ್ ಜತೆಗೆ ಎಪಿಸೋಡ್ ಮಾಡಿದ್ದರು. ಈ ಸಂದರ್ಭದಲ್ಲಿ ಆನೆ ಲದ್ದಿಯ ಟೀ ಕುಡಿದಿದ್ದರು.
ಈ ಟೀ ಕುರಿತ ಕುತೂಹಲವನ್ನು ಥಾಯ್ಲೆಂಡ್ ತಣಿಸುತ್ತದೆ. ಇಲ್ಲಿ ಸಾಕುವ ಆನೆಗಳಿಗೆ ತಿನ್ನಿಸಿದ ಚೆರಿ ಹಣ್ಣುಗಳನ್ನು ಲದ್ದಿಯಲ್ಲಿ ಹೆಕ್ಕಿ ತೆಗೆದುಕೊಂಡು ತೊಳೆದು ಕಾಫಿ, ಟೀಗೆ ಬಳಕೆ ಮಾಡುತ್ತಾರೆ ಎಂಬ ಸುದ್ದಿ ಇದೆ. ಆನೆ ಲದ್ದಿಯನ್ನು ಕಾಡು ಜನರು ಸೊಳ್ಳೆ ನಿವಾರಕವಾಗಿಯೂ ಬಳಕೆ ಮಾಡುತ್ತಿದ್ದರು. ಹಸುವಿನ ಸೆಗಣಿ ರೀತಿಯಲ್ಲೇ ಆನೆ ಲದ್ದಿಯ ಮೇಲೂ ಜನರಿಗೆ ಪೂಜ್ಯ ಭಾವನೆ ಇದೆ. ಔಷಧಿಯ ಗುಣಗಳಿವೆ ಎಂಬ ನಂಬಿಕೆ ಇದೆ.

ದುಷ್ಕೃತ್ಯಕ್ಕೆ ಬ್ರಹ್ಮಾಸ:
ಆನೆ ಲದ್ದಿ ಒಳ್ಳೆಯದಕ್ಕೆ ಬಳಕೆಯಾಗುವಂತೆಯೇ ದುಷ್ಕೃತ್ಯಕ್ಕೆ ಬ್ರಹ್ಮಾಸವಾದ ಉದಾಹರಣೆಗಳೂ ಇವೆ. ಕಾಡನ್ನು ನಾಶ ಮಾಡಬೇಕೆಂಬ ಉದ್ದೇಶದಿಂದ ಬೆಂಕಿ ಇಡುವ ದುಷ್ಕರ್ಮಿಗಳು ಆನೆ ಲದ್ದಿ ಬಳಕೆ ಮಾಡುತ್ತಾರೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಆನೆ ಲದ್ದಿಯಲ್ಲಿ ನಾರಿನ ಎಳೆಗಳು ಇರುತ್ತವೆ. ಕಿಡಿಗೇಡಿಗಳು ಒಣಗಿರುವ ಲದ್ದಿಗೆ ಗಂಧದ ಕಡ್ಡಿಯನ್ನು ಸಿಕ್ಕಿಸಿ ಮನೆ ಸೇರುತ್ತಾರೆ. ಗಂಧದ ಕಡ್ಡಿಯ ಬೆಂಕಿ ತಾಗಿ ಲದ್ದಿ ಹೊತ್ತಿಕೊಂಡು ಉರಿಯುವುದರಿಂದ ದುಷ್ಕರ್ಮಿಗಳು ಕೃತ್ಯ ನಡೆದ ಸ್ಥಳದಿಂದ ಕಾಲ್ಕೀಳುತ್ತಾರೆ. ಈ ರೀತಿ ಮಾಡಿರುವವರನ್ನು ಈಗಾಗಲೇ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಪರಿಜ್ಞಾನ ಕಲಿಸಿರುವ ‘ಲದ್ದಿ’
ನಡೆಯುವ ದಾರಿಯಲ್ಲಿ ಲದ್ದಿಯನ್ನು ನೋಡಿ ಸಮೀಪದ ಸ್ಥಳದಲ್ಲೇ ಆನೆ ಇರುವಿಕೆಯನ್ನು ಪತ್ತೆ ಮಾಡುವ ಪರಿಜ್ಞಾನವನ್ನು ಕಾಡು ಜನರು ಕಲಿತಿದ್ದಾರೆ. ಅರಣ್ಯದೊಳಗೆ ಇರುವ ಗ್ರಾಮಗಳಲ್ಲಿ ಆಗಾಗ್ಗೆ ಆನೆ ದಾಳಿ ಪ್ರಕರಣಗಳು ನಡೆಯುತ್ತಲೇ ಇವೆ. ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಕಾಡುವಾಸಿಗಳು ಬಳಸುವ ಕೌಶಲಗಳಲ್ಲಿ ಲದ್ದಿ ನೋಡಿ ಎಚ್ಚೆತ್ತುಕೊಳ್ಳುವುದು ಪ್ರಮುಖವಾದದ್ದು. ಪದೇ ಪದೇ ಲದ್ದಿ ಬಿದ್ದಿರುವ ಜಾಗಗಳನ್ನು ಗುರುತಿಸಿಕೊಳ್ಳುವುದು, ಅಲ್ಲಿ ಓಡಾಡುವಾಗ ಜಾಗರೂಕತೆಯಿಂದ ಇರುವುದು, ಹಸಿ ಲದ್ದಿ ಬಿದ್ದಿದ್ದ ಜಾಗದಲ್ಲಿ ಮೈ ತುಂಬಾ ಕಣ್ಣಾಗಿರುವುದನ್ನು ಗಿರಿಜನರು ಅನುಸರಿಸುತ್ತಿದ್ದಾರೆ.

ಆನೆ ಗಣತಿಗಾಗಿ ಲದ್ದಿಯನ್ನು ಪತ್ತೆ ಮಾಡಲಾಗುತ್ತದೆ. ಲದ್ದಿ ಪ್ರಮಾಣ ಗುರುತಿಸಿ ಆನೆಗಳ ಗುಂಪನ್ನು ಅಂದಾಜು ಮಾಡುತ್ತೇವೆ. ಲದ್ದಿ ಸಿಕ್ಕ ಜಾಗದಲ್ಲಿ ಆನೆಗಳ ಚಲನವಲನವನ್ನು ಖಚಿತಪಡಿಸಿಕೊಳ್ಳುತ್ತೇವೆ.ವಿನೋದ್‌ಗೌಡ, ಕೆ.ಗುಡಿ ಆರ್‌ಎ್ಒ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net