

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಮೆಂದಾರೆ ಗಿರಿಜನರ ಕಾಲನಿಯನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವ ಸಂಬಂಧ ಕೈಗೊಂಡಿದ್ದ ಸಮೀಕ್ಷೆ ಕಾರ್ಯ ಮಂಗಳವಾರ ಪೂರ್ಣಗೊಂಡಿದ್ದು, 58 ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.
ಮಾಹಿತಿ ಸಂಗ್ರಹಿಸುವ ಸಂಬಂಧ ಎಸಿ ಶಿವಮೂರ್ತಿ ನೇತೃತ್ವದಲ್ಲಿ 6 ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿತ್ತು. ಮೇ 27 ರಿಂದ 29ರವರೆಗೆ ಮನೆಗಳ ಸಮೀಕ್ಷೆ ನಡೆಸಿ ನಿಗದಿತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಿ ಇದರ ದಾಖಲೆಯನ್ನು ಮೇ 30 ರಂದು ಸಲ್ಲಿಸುವಂತೆ ಹಾಗೂ ವಿಸ್ತೃತ ವರದಿಯನ್ನು ಜೂ. 5 ರೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಸೋಮವಾರ ನಡೆದ ಸಮೀಕ್ಷೆಯಲ್ಲಿ 32 ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಮಂಗಳವಾರ 26 ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಿಲಾಗಿದ್ದು, ಸಮೀಕ್ಷೆ ಪೂರ್ಣಗೊಂಡಿದೆ.
ಸಮೀಕ್ಷೆ ಕಾರ್ಯದಲ್ಲಿ ಕಂದಾಯ ಇಲಾಖೆಯ ರಾಮಾಪುರ ಹೋಬಳಿ ರಾಜಸ್ವ ನಿರೀಕ್ಷಕ ಶಿವಕುಮಾರ್, ಗ್ರಾಮ ಅಡಳಿತ ಅಧಿಕಾರಿ ಎಂ. ವಿನೋದ್‌ಕುಮಾರ್, ಅರಣ್ಯ ಇಲಾಖೆಯ ಮ.ಬೆಟ್ಟ ಉಪ ವಲಯ ಅರಣ್ಯಾಧಿಕಾರಿ ಶಿವರಾಜು, ಅರಣ್ಯ ರಕ್ಷಕ ಸಂಗಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮ.ಬೆಟ್ಟದ ಪಿಡಿಒ ಕಿರಣ್, ಭೂ ಮಾಪನ ಇಲಾಖೆಯ ತಪಾಸಕ ಶ್ರೀನಿವಾಸ್‌ಮೂರ್ತಿ, ಭೂ ಮಾಪಕ ವಿರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೆಂದಾರೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮಾದೇವಿ, ಹಳೆಯೂರಿನ ಮಾದಲಾಂಬಿಕ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದರು. ಈ ವೇಳೆ ಗ್ರಾಮದ ಹಿರಿಯ ಮುಖಂಡರಾದ ಭೈರ, ಮಾದಯ್ಯ, ಪಡಗಲ, ಶಿವಕುಮಾರ್, ವೀರಭದ್ರ, ಪೊನ್ನು ಹಾಗೂ ಇನ್ನಿತರರು ಇದ್ದರು.
ಸಂಘದ ಸಹಕಾರ: ಸಮೀಕ್ಷೆ ಕಾರ್ಯಕ್ಕೆ ತಾಲೂಕು ಸೋಲಿಗ ಅಭಿವೃದ್ಧಿ ಸಂಘ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ದೊಡ್ಡಸಿದ್ದಯ್ಯ ಹಾಗೂ ಪದಾಧಿಕಾರಿಗಳು ಈ ಕಾರ್ಯದಲ್ಲಿ ಭಾಗಿಯಾಗಿ ಗಿರಿಜನರಿಗೆ ತಿಳಿವಳಿಕೆ ನೀಡುವುದರ ಮೂಲಕ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸಹಕಾರ ನೀಡಿದರು.