ಹೊರಗುತ್ತಿಗೆ ನೌಕರರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Oplus_0
Oplus_0
Published on

ಯಳಂದೂರು ; ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಮುಂಭಾಗ ಮಂಗಳವಾರ ಹೊರ ಗುತ್ತಿಗೆ ನೌಕರರ ಮೇಲೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಾಂತಿ ಏಜೆನ್ಸಿ ಮೈಸೂರು ಇವರಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆಯ ಸದಸ್ಯರು ಪ್ರತಿಭಟಿಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಪರಶಿವಮೂರ್ತಿ ಮಾತನಾಡಿ, ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಳೆದ 10 ವರ್ಷಗಳಿಂದ ಗುರುಸ್ವಾಮಿ ಎಂಬ ಹೊರಗುತ್ತಿಗೆ ನೌಕರರು ಡೇಟಾ ಎಂಟ್ರಿ ಆಪರೇಟರಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದರು. ಇವರಿಗೆ ಸರಿಯಾಗಿ ವೇತನ, ಇಎಸ್‌ಐ ಹಾಗೂ ಪಿಎಫ್ ನೀಡುತ್ತಿಲ್ಲ. ಈ ಬಗ್ಗೆ ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಕ್ರಮ ವಹಿಸಿಲ್ಲ. ಅಲ್ಲದೇ ವಿನಾ ಕಾರಣ ಇವರು ಸೇರಿದಂತೆ ಅನೇಕ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ಹೊರ ಹಾಕಲಾಗಿದೆ ಎಂದು ಆರೋಪಿಸಿದರು.

ಸ್ಥಳಕ್ಕೆ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಇಲ್ಲಿನ ನಮ್ಮ ಕಚೇರಿಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗುರುಸ್ವಾಮಿ ಎಂಬುವವರು ಕಚೇರಿಯ ಗೌಪ್ಯ ಮಾಹಿತಿಯನ್ನು ಹೊರಗಿನ ವ್ಯಕ್ತಿಗಳಿಗೆ ಸೋರಿಕೆ ಮಾಡುತ್ತಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೂ ಧಮ್ಕಿ ಹಾಕುತ್ತಿದ್ದರು. ಈ ಬಗ್ಗೆ ಕೆಲ ಸಾರ್ವಜನಿಕರು ನಮ್ಮ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ನಮ್ಮ ಕಚೇರಿಯಲ್ಲಿ ದಾಖಲೆಗಳು ಇವೆ. ಹಾಗಾಗಿ ಇವರನ್ನು ಹಿರಿಯ ಅಧಿಕಾರಿಗಳು ಇವರನ್ನು ಕೆಲಸದಿಂದ ವಜಾ ಮಾಡಿ ಎಂದು ಆದೇಶ ಮಾಡಿರುವುದರಿಂದ ಇವರನ್ನು ತೆಗೆದು ಹಾಕಲಾಗಿದೆ. ಮುಂದೆ ಈ ತರಹದ ಕೆಲಸಗಳನ್ನು ಮಾಡುವುದಿಲ್ಲವೆಂದು ಗುರುಸ್ವಾಮಿಯಿಂದ ಕ್ಷಮಾಪಣೆ ಪತ್ರವನ್ನು ಬರೆಯಿಸಿಕೊಂಡು ಮತ್ತೆ ಹೊರ ಗುತ್ತಿಗೆ ಮೇಲೆ ಕೆಲಸಕ್ಕೆ ನೇಮಿಸಿಕೊಳ್ಳಲು ಕ್ರಮ ವಹಿಸುತ್ತೇನೆ. ಇಲಾಖೆಯ ಇತರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.

ಜಿಲ್ಲಾ ಕಾರ್ಯದರ್ಶಿ ಬದನಗುಪ್ಪೆ ಮಹೇಶ್, ಎಂ. ರಾಜಣ್ಣ, ಮೀರೆ ಸಿದ್ದರಾಜು, ಮದ್ದೂರು ಪ್ರಸಾದ್, ಮರಪ್ಪ, ರಾಜು, ಬಸವಾಪುರ ರಾಜಶೇಖರ್, ಚಂಗಚಹಳ್ಳಿ ನಾಗೇಂದ್ರ, ಕೊಮಾರನಪುರ, ಮರಯ್ಯ ಕೆಸ್ತೂರು, ರಾಜಣ್ಣ, ಜೋಗಿ ಸಿದ್ದಯ್ಯ, ಶಿವಣ್ಣ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net