ಮೆಂದಾರೆ ಪಾಲಿಗೆ ಮಂದಾರವಾದ ‘ಸಮೀಕ್ಷೆ’

oppo_2
oppo_2
Published on

ಹನೂರು; ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಕಲ್ಲೇಟು ತಿಂದು ನೋವು ಅನುಭವಿಸುತ್ತಿರುವ ಮೆಂದಾರೆ ಗ್ರಾಮದ ಸೋಲಿಗರ ಪಾಲಿಗೆ ಸಮೀಕ್ಷೆ ಮನ ಸೆಳೆಯುವ ಮಂದಾರ ಪುಷ್ಪದಂತೆ ಭಾಸವಾಯಿತು.

ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಮೆಂದಾರೆ ಗಿರಿಜನ ಕಾಲನಿಯನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವ ಸಂಬಂಧ ಸೋಮವಾರ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ ತಂಡ ಗ್ರಾಮಕ್ಕೆ ಭೇಟಿ ನೀಡಿ ಮನೆ ಮನೆಗೆ ತೆರಳಿ ಸಮೀಕ್ಷೆ ಆರಂಭಿಸಿತು.
ಏ.26 ರಂದು ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಮೆಂದಾರೆ ಗ್ರಾಮದ ಗಿರಿಜನರು ಹಲ್ಲೆಗೊಳಗಾಗಿದ್ದರು. ಇದರಿಂದ ಭಯಭೀತರಾಗಿದ್ದರು. ಜತೆಗೆ ಅಗತ್ಯ ಮೂಲ ಸೌಕರ್ಯವಿಲ್ಲದ ಹಿನ್ನೆಲೆಯಲ್ಲಿ ಇಲ್ಲಿನ ಜನರು ಗ್ರಾಮ ತೊರೆಯಲು ನಿರ್ಧರಿಸಿದ್ದರು. ಮೇ 13 ರಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿನ ಜನರು ಸಮುದಾಯದ ಜನರು ಹೆಚ್ಚಾಗಿ ವಾಸಿಸುವ ಪಾಲಾರ್‌ಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿದ್ದರು.

ಕಾಲನಿ ಸ್ಥಳಾಂತರದ ಸಂಬಂದ ಅವಶ್ಯಕ ಮಾಹಿತಿ ಪಡೆದು ಮನೆಗಳ ಸಮೀಕ್ಷೆ ನಡೆಸಿ ವಿಸ್ತೃತ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದ್ದರು. ಈ ದಿಸೆಯಲ್ಲಿ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ 6 ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ ಸಮಿತಿಯನ್ನು ರಚಿಸಿತ್ತು.

ರಚಿಸಿದ ಸಮಿತಿಯಂತೆ ಸೋಮವಾರ ಕಂದಾಯ ಇಲಾಖೆ ರಾಮಾಪುರ ಹೋಬಳಿ ರಾಜಸ್ವ ನಿರೀಕ್ಷಕ ಶಿವಕುಮಾರ್, ಗ್ರಾಮ ಅಡಳಿತ ಅಧಿಕಾರಿ ಎಂ.ವಿನೋದ್‌ಕುಮಾರ್, ಅರಣ್ಯ ಇಲಾಖೆಯ ಮ.ಬೆಟ್ಟ ಉಪವಲಯ ಅರಣ್ಯಾಧಿಕಾರಿ ಶಿವರಾಜು, ಅರಣ್ಯ ರಕ್ಷಕ ಸಂಗಪ್ಪ, ಮಾಪನ ಇಲಾಖೆಯ ಭೂ ಮಾಪಕರಾದ ಶ್ರೀನಿವಾಸಮೂರ್ತಿ, ವೀರೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮೆಂದಾರೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮಾದೇವಿ, ಹಳೆಯೂರಿನ ಮಾದಲಾಂಬಿಕ ಅವರ ತಂಡ ಗ್ರಾಮಕ್ಕೆ ತೆರಳಿ ಸಮೀಕ್ಷೆ ಕಾರ್ಯ ಆರಂಭಿಸಿದೆ. 2 ದಿನಗಳವರೆಗೆ ಸಮೀಕ್ಷೆ ನಡೆಯಲಿದ್ದು, ನಿಗದಿತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಲಿದೆ.

ಏನೆಲ್ಲಾ ಮಾಹಿತಿ ಸಂಗ್ರಹ?
ಸಮೀಕ್ಷೆಯಲ್ಲಿ ಆಧಾರ್, ಪಡಿತರ ಚೀಟಿ, ಉದ್ಯೋಗ ಚೀಟಿ, ಬ್ಯಾಂಕ್ ವಿವರ, ಜಾತಿ, ಆದಾಯ ಪ್ರಮಾಣ ಪತ್ರ, ಕುಡಿಯುವ ನೀರಿನ ವ್ಯವಸ್ಥೆ, ಕೃಷಿ ಭೂಮಿ, ಜಾನುವಾರು, ವಾಸದ ಮನೆಯ ವಿವರ ಹಾಗೂ ಗ್ರಾಮ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡಲಾಗಿರುವ ಸೌಕರ್ಯದ ವಿವರ ಸೇರಿದಂತೆ 20 ಅಂಶಗಳ ಮಾಹಿತಿಯನ್ನು ಸಂಗ್ರಹಿಸಲಾಯಿತು.

ದಾಖಲೆಗಳನ್ನು ನೀಡಿದ ಜನರು:
ಸಮೀಕ್ಷೆ ನಡೆಸಲು ಅಧಿಕಾರಿಗಳ ತಂಡ ಆಗಮಿಸುವುದರ ಬಗ್ಗೆ ಈಗಾಗಲೇ ಮೆಂದಾರೆ ಗ್ರಾಮದ ಜನರಿಗೆ ತಿಳಿದಿತ್ತು. ಹಾಗಾಗಿ ಸಿಬ್ಬಂದಿ ತಂಡ ಗ್ರಾಮಕ್ಕೆ ಆಗಮಿಸುವ ಮೊದಲೇ ಜನರು ಅಗತ್ಯ ದಾಖಲೆಗಳನ್ನು ಕೈಯಲ್ಲಿ ಹಿಡಿದು ಕುಳಿತಿದ್ದರು. ಆಗಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಅಗತ್ಯ ಮಾಹಿತಿ ಪಡೆದು ನಿಗದಿತ ನಮೂನೆ ಭರ್ತಿ ಮಾಡಿದರು. ಈ ವೇಳೆ ಗಿರಿಜನರು ಪಾಲಾರ್‌ಗೆ ಸ್ಥಳಾಂತರಗೊಳ್ಳುವ ಆಶಯವನ್ನು ಹೊಂದಿದ್ದು, ಲವಲವಿಕೆಯಿಂದ ಮಾಹಿತಿ ನೀಡಿದರು.

ಅಳತೆ ಕಾರ್ಯ: ಈ ಸಂಬಂಧ ಭೂಮಾಪನಾ ಇಲಾಖೆಯ ಅಧಿಕಾರಿಗಳು ಪ್ರತಿ ಮನೆಯನ್ನು ಅಳತೆ ಮಾಡಿ ನಮೂದಿಸಿದರು. ಈ ಬಗ್ಗೆ ಕುಟುಂಬದ ಮುಖ್ಯಸ್ಥರಿಂದ ಮಾಹಿತಿ ಪಡೆಯಲಾಯಿತು.

ನಮ್ಮ ಗ್ರಾಮವನ್ನು ಸ್ಥಳಾಂತರ ಮಾಡಲು ಸಮೀಕ್ಷೆ ಆರಂಭಗೊಂಡಿದೆ. ಆದರೆ ಇದನ್ನು ಬೇಗ ಮುಗಿಸಿಕೊಡಬೇಕು. ಅಂತೆಯೇ ಸಮೀಕ್ಷೆ ವರದಿ ಆಧರಿಸಿ ಶೀಘ್ರದಲ್ಲೇ ಪುನರ್ವಸತಿ ಕಲ್ಪಿಸಿಕೊಡಬೇಕು.ಮಾದಯ್ಯ, ಮೆಂದಾರೆ ಗ್ರಾಮಸ್ಥ, ಮಹದೇಶ್ವರ ಬೆಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net