

ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾರಿಗೆ ಸಂಸ್ಥೆ ಸಮರ್ಪಕವಾಗಿ ಬಸ್ ನಿಯೋಜಿಸದ ಪರಿಣಾಮ ಸಾವಿರಾರು ಪ್ರವಾಸಿಗರು ತೀವ್ರ ತೊಂದರೆ ಎದುರಿಸುವಂತಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಹಾಗೂ ಭಕ್ತರು ಬೆಟ್ಟದ ತಪ್ಪಲಿನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ಸಾರಿಗೆ ಬಸ್ಸುಗಳಲ್ಲಿಯೇ ಹೋಗಬೇಕು.
ಪ್ರತಿ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೂ ಸಾರಿಗೆ ಇಲಾಖೆ ಬೆಟ್ಟಕ್ಕೆ ಸಾಕಷ್ಟು ಬಸ್ಸುಗಳನ್ನು ನಿಯೋಜಿಸದ ಕಾರಣ, ಸಾವಿರಾರು ಪ್ರವಾಸಿಗರು ಬಿಸಿಲಿನಲ್ಲಿ ಮೈಲಿಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಬಸ್ಸಿಗಾಗಿ ಕಾಯಬೇಕಾಗಿದೆ.
ನಿಯೋಜಿರುವ ಎರಡು ಮೂರು ಬಸ್ಸುಗಳು ಶಕ್ತಿ ಯೋಜನೆಯಲ್ಲಿ ಆಗಮಿಸುವ ನೂರಾರು ಮಹಿಳೆಯರಿಗೆ ಸಾಲದೆ ನೂಕುನುಗ್ಗುಲು ಉಂಟಾಗುತ್ತಿದೆ. ಸಂಸ್ಥೆಯು ಈಗ ನಿಯೋಜಿಸಿರುವ ಮೂರು ಬಸ್ಸುಗಳ ಜತೆಗೆ ಮತ್ತಷ್ಟು ಬಸ್ಸುಗಳನ್ನು ಹಾಕಬೇಕಾಗಿ ಪ್ರವಾಸಿಗರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.