

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಜೈಲು ಸೇರಿ ಗ್ರಾಮಕ್ಕೆ ಹಿಂತಿರುಗಿರುವ ಹಾಗೂ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವವರು ಕಾನೂನಿನ ಬಲೆಗೆ ಸಿಲುಕಿದ್ದಾರೆ. ಇದು ಕುಟುಂಬದವರು ಸೇರಿದಂತೆ ಊರು ಬಿಟ್ಟಿರುವವರಿಗೆ ಮಾನಸಿಕ ಯಾತನೆಯಾಗಿದೆ.
ಅಗತ್ಯ ಮೂಲಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ಏ.26 ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಇಂಡಿಗನತ್ತ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಆದರೆ, ಈ ವೇಳೆ ಸಮೀಪದ ಮೆಂದಾರೆ ಗಿರಿಜನರು ಗ್ರಾಮದ ಮತಗಟ್ಟೆ ಆಗಮಿಸಿದ್ದು 14 ಜನರು ಮತ ಚಲಾಯಿಸಿದ್ದರು. ಇದರಿಂದ ಇಂಡಿಗನತ್ತ ಗ್ರಾಮಸ್ಥರಿಂದ ರೊಚ್ಚಿಗೆದ್ದ ಮತಗಟ್ಟೆ ಧ್ವಂಸಕ್ಕೆ ಕಾರಣವಾಯಿತು. ಈ ವೇಳೆ ಮೆಂದಾರೆ ಗ್ರಾಮದ ಗಿರಿಜನರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಹಲ್ಲೆಗೊಳಗಾದರು.
ಈ ಹಿನ್ನೆಲೆ ಮ.ಬೆಟ್ಟ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ದೂರಿನ ಮೇರೆಗೆ ಪೊಲೀಸರು ಈಗಾಗಲೇ 45 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಇವರನ್ನು ಕಳೆದ ವಾರ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನಧ್ವನಿ ಬಿ.ವೆಂಕಟೇಶ್ ಬೇಡಗಂಪಣ ಸಮುದಾಯದ ಮುಖಂಡರ ಸಹಕಾರ ಪಡೆದು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿ ಗ್ರಾಮಕ್ಕೆ ಕರೆ ತಂದಿದ್ದಾರೆ. ಆದರೂ ಜೈಲಿನಿಂದ ವಾಪಸಾಗಿರುವ ಇವರು ಕಾನೂನಿನ ಬಲೆಗೆ ಸಿಲುಕಿದ್ದು ನೆಮ್ಮದಿಯಿಲ್ಲದಂತಾಗಿದೆ.
ಯಾವ್ಯಾವ ಪ್ರಕರಣಗಳು
ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಸುಮಾರು 150 ರಿಂದ 200 ಜನರು ಭಾಗಿಯಾಗಿದ್ದರು ಎನ್ನಲಾಗಿದೆ. ಇದರ ಆಧಾರದ ಮೇಲೆ ಇಂಡಿಗನತ್ತ ಗ್ರಾಮಸ್ಥದ 41 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ಜತೆಗೆ ಇನ್ನುಳಿದ ಕೆಲವರ ಮೇಲೂ ಪ್ರಕರಣ ದಾಖಲಾಗಿದೆ. ಎಫ್‌ಐಆರ್ ಪ್ರಕಾರ ಐಪಿಸಿ 1860 ಕಾಯ್ದೆಯಡಿ 143, 147, 148, 341, 42,353,332,307,354,436,427,149 ಹಾಗೂ 1951 ಮತ್ತು 1988 ಕಾಯ್ದೆಯಡಿ 134 ಬಿ, 135, 135 ಎ ಹಾಗೂ 136 ಕಲಂನಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕಾರ ಕೊಲೆ ಯತ್ನ, ಮನೆ ಹಾಗೂ ವಾಸಯೋಗ್ಯದ ಕಟ್ಟಡ ನಾಶಕ್ಕೆ ಬೆಂಕಿ, ಅತ್ಯಾಚಾರ ಹಾಗೂ ಹಲ್ಲೆಯತ್ನ, ನೌಕರರ ಕರ್ತವ್ಯಕ್ಕೆ ಅಡ್ಡಿ, ಅಕ್ರಮ ಕೂಟ ರಚನೆ, ದೊಂಬಿ ಗಲಾಟೆ, ಮಾರಕಾಸ್ತ್ರಗಳಿಂದ ಗಲಾಟೆ, ವ್ಯಕ್ತಿಯ ಅಕ್ರಮ ಬಂಧನ, ಅಕ್ರಮವಾಗಿ ವ್ಯಕ್ತಿಯನ್ನು ಬಂಧನದಲ್ಲಿರಿಸಿ ದಂಡನೆ, ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲೆ ಹಲ್ಲೆ, ಶಸ್ತ್ರಾಸ್ತ್ರಗಳೊಂದಿಗೆ ಮತಗಟ್ಟೆಗೆ ತೆರಳುವುದು, ಮತ ಹಾಗೂ ಮತಪತ್ರವನ್ನು ಅಕ್ರಮವಾಗಿ ಕೊಂಡೊಯ್ಯುವುದು, ಮತಗಟ್ಟೆಯನ್ನು ಅಕ್ರಮವಾಗಿ ವಶಕ್ಕೆ ಪಡೆದು ಕೃತ್ಯ ಎಸಗಿರುವುದು ಹಾಗೂ ಇತರೆ ಅಪರಾಧಗಳನ್ನು ಎಸಗಿದ್ದಕ್ಕಾಗಿ ದಂಡ ವಿಧಿಸುವ ಅವಕಾಶವಿದೆ.
ಮನೆ ಮಾಡಿರುವ ಭಯ
ಪ್ರಕರಣದಲ್ಲಿ ಈಗಾಗಲೇ ಮಹಿಳೆಯರು ಸೇರಿದಂತೆ 45 ಜನರು 21 ದಿನಗಳ ಕಾಲ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇವರು ಮ.ಬೆಟ್ಟದ ಪೊಲೀಸ್ ಠಾಣೆಗೆ ತೆರಳಿ ಸಹಿ ಮಾಡಬೇಕಿದೆ. ಗಲಭೆಯಲ್ಲಿ ಭಾಗಿಯಾಗಿದ್ದ ಇನ್ನೂ ಕೆಲವರ ಮೇಲೆ ಪ್ರಕರಣ ದಾಖಲಾಗಿದೆ. ಗುರುವಾರ ಗ್ರಾಮಕ್ಕೆ ಆಗಮಿಸಿದ್ದ ವೀರಣ್ಣ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಹಾಗಾಗಿ ಬಂಧನದ ಭೀತಿಯಲ್ಲಿ ಕೃತ್ಯದಲ್ಲಿ ಭಾಗಿಯಾದವರು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಇದರಿಂದ ಕುಟುಂಬಸ್ಥರಲ್ಲಿ ನೆಮ್ಮದಿ ಇಲ್ಲದಂತಾಗಿದ್ದು ಇನ್ನು ಸಹ ಭಯದ ವಾತಾವರಣದಲ್ಲೇ ಇಲ್ಲಿನ ಜನರಿದ್ದಾರೆ.
ಪ್ರಕರಣದಿಂದ 21 ದಿನಗಳ ಕಾಲ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಗ್ರಾಮಕ್ಕೆ ಮರಳಿದ್ದೇನೆ. ಪ್ರತಿ ಶನಿವಾರ ಪೊಲೀಸ್ ಠಾಣೆಗೆ ತೆರಳಿ ಸಹಿ ಮಾಡಬೇಕಿದ್ದು, ಈ ಘಟನೆಯಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ಕಷ್ಟ ಇನ್ಯಾರಿಗೂ ಬರಬಾರದು.ಪುಟ್ಟತಂಬಡಿ, ಇಂಡಿಗನತ್ತ ಗ್ರಾಮಸ್ಥ ಪ್ರಕರಣದಲ್ಲಿ 45 ಜನರನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನು ಸಹ ಪ್ರಕರಣದಲ್ಲಿ ಭಾಗಿಯಾಗಿರುವ 6 ಜನರು ತಲೆ ಮರೆಸಿಕೊಂಡದ್ದಾರೆ. ಈ ಬಗ್ಗೆ ನಿಗಾ ವಹಿಸಲಾಗಿದೆ.ಜಗದೀಶ್, ಇನ್‌ಸ್ಪೆಕ್ಟರ್ ಮಹದೇಶ್ವರ ಬೆಟ್ಟ