ಕೊಳ್ಳೇಗಾಲ: ಪಟ್ಟಣದ ಹೊಸಅಣಗಳ್ಳಿ ಬಡಾವಣೆಯಲ್ಲಿ ಕುರುಬನಕಟ್ಟೆ ಶ್ರೀ ಸಿದ್ದಪ್ಪಾಜಿ ಕಂಡಾಯ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಗುರುವಾರ ಸಂಜೆ ಪಟ್ಟಣದ ಮರಳೇಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಕುರುಬನಕಟ್ಟೆಯಿಂದ ಆಗಮಿಸಿದ್ದ ಕಂಡಾಯಗಳನ್ನು ನೀಲಗಾರರು ಸ್ವಚ್ಛಗೊಳಿಸಿ ವಿವಿಧ ಹೂವುಗಳಿಂದ ಅಲಂಕಾರಿಸಿದರು. ನಂತರ ಪೂಜೆ ಸಲ್ಲಿಸಿದ ಬಳಿಕ ನೀಲಗಾರರಾದ ಕುಮಾರ, ಶಾಂತರಾಜು, ನಿಂಗರಾಜು, ಉಮೇಶ, ಕರಿಯ ನಿಂಗರಾಜು, ರಾಜು, ಕಂಡಾಯಗಳನ್ನು ಹೊತ್ತು ಮಂಗಳವಾದ್ಯದೊಡನೆ ಚಿನ್ನದ ಅಂಗಡಿ ಬೀದಿ, ತರಕಾರಿ ಮಾರ್ಕೆಟ್ ರಸ್ತೆ, ಭೀಮನಗರ, ಆನಂದಜ್ಯೋತಿ ಕಾಲನಿ ಮಾರ್ಗವಾಗಿ ಮೆರವಣಿಗೆ ಮಾಡಿ ತಂದು ಹೊಸ ಅಣಗಳ್ಳಿ ಬಡಾವಣೆಯ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಇರಿಸಿದರು.
ಹೊಸ ಅಣಗಳ್ಳಿ ಬಡಾವಣೆಯ ದೊಡ್ಡಯಜಮಾನ ಮಹದೇವ, ಯಜಮಾನರಾದ ರಾಚಯ್ಯ, ಶಿವಣ್ಣ, ಚಿಕ್ಕಣ್ಣ, ನಾರಾಯಣಮೂರ್ತಿ ಇತರರಿದ್ದರು. ನಂತರ, ಶುಕ್ರವಾರ ಬಡಾವಣೆಯ ಎಲ್ಲ ಬೀದಿಗಳಲ್ಲಿ ಮೆರವಣಿಗೆ ಜರುಗಿತು. ಮಂಗಳವಾದ್ಯ ನಾದಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಬಡಾವಣೆಯನ್ನು ಹಸಿರು ತಳಿರು ತೋರಣ ಹಾಗೂ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು.