

ಚಾಮರಾಜನಗರ: ಪ್ರತಿಯೊಬ್ಬ ವ್ಯಕ್ತಿಗೂ ಮಾನಸಿಕ ಆರೋಗ್ಯ ಬಹುಮುಖ್ಯವಾಗಿದ್ದು, ಮಾನಸಿಕ ರೋಗಗಳ ಬಗ್ಗೆ ಜಾಗೃತಿವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಸ್ಕಿಜೋಫೋನಿಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಕಿಜೋಫೋನಿಯಾ ಗುಣವಾಗಬಲ್ಲ ಕಾಯಿಲೆಯಾಗಿದ್ದು, ಈ ರೋಗ ಬಂದ ವ್ಯಕ್ತಿಗೆ ಕುಟುಂಬದವರು ಬೆಂಬಲವಾಗಿ ನಿಲ್ಲಬೇಕು. ಈ ಕಾಯಿಲೆಗೆ 6 ತಿಂಗಳ ಮಾತ್ರೆ ತೆಗೆದುಕೊಂಡರೆ ಸಂಪೂರ್ಣವಾಗಿ ಗುಣಮುಖವಾಗಬಹುದು. ಈ ಹಿಂದೆ ಹಲವು ವರ್ಷ ಮಾತ್ರೆ ಪಡೆಯಬೇಕಿತ್ತು. ಆದರೆ, ಈಗ ಆ ರೀತಿಯ ವಾತಾವರಣವಿಲ್ಲ ಎಂದರು.
ಸ್ಕಿಜೋಫೋನಿಯಾ ಕಾಯಿಲೆ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಈ ಕಾಯಿಲೆ ಬಂದವರು ಚಟುವಟಿಕೆಯಿಂದ ಇರುವುದಿಲ್ಲ. ಇಂತಹವರನ್ನು ಕೊಠಡಿಗಳಲ್ಲಿ ಕೂಡಿ ಹಾಕುವ ಉದಾಹರಣೆಗಳು ಇರುತ್ತದೆ. ಆದ್ದರಿಂದ ಸೂಕ್ತ ಚಿಕಿತ್ಸೆ ಕೊಡಿಸಿದರೆ ಅನುಕೂಲವಾಗುತ್ತದೆ. ಈ ರೋಗದ ಲಕ್ಷಣಗಳು ಕಂಡುಬರುವ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಜನರು ಮುಂದಾಗಬೇಕು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ವ್ಯಕ್ತಿಗೆ ಮಾನಸಿಕ ಆರೋಗ್ಯ ಬಹಳ ಮುಖ್ಯ. ಸ್ಕಿಜೋಫೋನಿಯಾ ಕಾಯಿಲೆಗೆ ತುತ್ತಾದವರು ಭ್ರಮೆ, ದಿಗ್ಭ್ರಮೆಗಳಲ್ಲಿ ಬದುಕುತ್ತಾರೆ. 300-400 ಜನರಲ್ಲಿ ಒಬ್ಬರಿಗೆ ಸ್ಕಿಜೋಫೋನಿಯಾ ಕಾಯಿಲೆ ಬರುತ್ತದೆ. ಈ ಕಾಯಿಲೆಗೆ ತುತ್ತಾದವರು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಇಲಾಖೆಯಿಂದ ಪ್ರತಿ ವರ್ಷ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾನಸಿಕ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಮನೋಚೈತನ್ಯ ಕ್ಲಿನಿಕ್ ಮೂಲಕ ಮಾನಸಿಕ ಕಾಯಿಲೆಗೆ ಚಿಕಿತ್ಸೆ, ಕೌನ್ಸೆಲಿಂಗ್ ಕೊಡಲಾಗುತ್ತಿದೆ. ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ, ಜಿಲ್ಲಾಸ್ಪತ್ರೆ ಮನೋರೋಗ ತಜ್ಞ ಡಾ.ಎಂ.ಎನ್.ರಾಜೇಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅಂಕಪ್ಪ, ಜಿಲ್ಲಾ ಕ್ಷಯರೋಗ ನಿಯಂತ್ರ ಣಾಧಿಕಾರಿ ಡಾ.ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಅಬಕಾರಿ ಇಲಾಖೆಯ ಉಪ ಆಯುಕ್ತ ನಾಗಶಯನ, ಮನೋನಿಧಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪುಟ್ಟರಾಜು, ಆರೋಗ್ಯ ಇಲಾಖೆಯ ಜಿಲ್ಲಾ ದೊರೆಸ್ವಾಮಿನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.