ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಮೇ.28 ರಂದುಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಿಂದ ಅಂದು ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಹೊರಟು, ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನ ತಲುಪಿ ಪ್ರತಿಭಟನೆ ನಡೆಸಲಾಗುವುದು. ವಿದ್ಯುತ್ ಸಂಪರ್ಕ ದುಬಾರಿ ವೆಚ್ಚ ಕೈ ಬಿಡುವಂತೆ. ಮಳೆ ಮತ್ತು ಬಿರು ಗಾಳಿಯಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ. ಬರ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ೋಷಣೆ ಮಾಡುವಂತೆ. ಕಬ್ಬಿನ ಬಾಕಿ ಹಣ ಪಾವತಿಸಲು. ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳ ತಪ್ಪಿಸಿ ಹಕ್ಕು ಪತ್ರ ವಿತರಣೆ ಮಾಡುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರ ಎಸ್.ಆರ್.ಹಿರೇಮಠ್, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಟಿ.ಪಿ.ಲೋಕೇಶ್, ಬಡಗಲಪುರ ನಾಗೇಂದ್ರ, ಚಾಮರಸ ಮಾಲೀ ಪಾಟೀಲ್ ಹಾಗೂ ಇನ್ನಿತರೆ ರಾಜ್ಯಮಟ್ಟದ ನಾಯಕರು ಹಾಗೂ ಅಪಾರ ಸಂಖ್ಯೆಯಲ್ಲಿ ರೈತರು ಭಾಗವಹಿಸುವರು ಎಂದು ಹೇಳಿದರು. ಗೋಷ್ಠಿಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ಚಿನ್ನಸ್ವಾಮಿ ಗೌಂಡರ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಕಾರ್ಯಾಧ್ಯಕ್ಷ ಶೈಲೇಂದ್ರ, ಉಪಾಧ್ಯಕ್ಷ ಗೌಡೇಗೌಡ, ತಾಲೂಕು ಅಧ್ಯಕ್ಷ ಮಹೇಂದ್ರ ಹಾಜರಿದ್ದರು.