

ಚಾಮರಾಜನಗರ: ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದಲೂ ನಿರಂತರವಾಗಿ ಸುರಿದ ಮಳೆಗೆ ಮನೆಯ ಛಾವಣಿ ಹಾಗೂ ಗೋಡೆ ಕುಸಿದಿದೆ.
ಅಮಚವಾಡಿ ಗ್ರಾಮದ ಲಕ್ಷ್ಮೀ ಎಂಬುವವರಿಗೆ ಸೇರಿದ ಮನೆ ಗುರುವಾರ ರಾತ್ರಿ ಕುಸಿದಿದೆ. ಕಳೆದ ಕೆಲ ದಿನಗಳಿಂದಲೂ ಸುರಿದ ಮಳೆಯಿಂದಾಗಿ ಗೋಡೆಗಳು ಒದ್ದೆಯಾಗಿದ್ದವು. ಲಕ್ಷ್ಮೀ ಎಂಬುವವರು ತಾಯಿಯ ಮನೆಗೆ ಹೋಗಿದ್ದು ಅಲ್ಲಿಯೇ ಉಳಿದುಕೊಂಡಿದ್ದರಿಂದ ಗೋಡೆ, ಛಾವಣಿ ಕುಸಿದ ಸಂದರ್ಭದಲ್ಲಿ ಯಾರೂ ಮನೆಯಲ್ಲಿ ಇರಲಿಲ್ಲ. ಏಕಾಏಕಿ ಕುಸಿದ ಗೋಡೆ, ಛಾವಣಿಯಿಂದಾಗಿ ಮನೆಯ ಒಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ. ಇದರಿಂದ ಲಕ್ಷ್ಮೀ ಅವರ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಇದ್ದ ಒಂದು ಮನೆ ಕುಸಿದು ಮನೆಯ ನಿರ್ಮಾಣ ಮಾಡುವುದು ದುಸ್ತರವಾಗಿರುವುದರಿಂದ ಸೂಕ್ತ ಪರಿಹಾರ ಕೊಡಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.