

ಚಾಮರಾಜನಗರ: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೂ. 3ರಂದು ನಡೆಯಲಿರುವ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎಂ.ನಾಗೇಂದ್ರ ಬಾಬು ಅವರಿಗೆ ಪ್ರಥಮ ಪ್ರಾಶಸ್ತಯದ ಮತ ನೀಡಿ ಗೆಲ್ಲಿಸಬೇಕು ಎಂದು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಕದಂಬ ನಾ.ಅಂಬರೀಶ್ ಮನವಿ ಮಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂ.ನಾಗೇಂದ್ರ ಬಾಬು ಅವರು ಸ್ಪರ್ಧಿಸಿ ಪರಾಭವಗೊಂಡಿದ್ದರು. ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಅವರಿಗೆ ಉತ್ತಮ ವಾತಾವರಣ ವ್ಯಕ್ತವಾಗುತ್ತಿದೆ. ಶಿಕ್ಷಕರು ತಮ್ಮ ಅಮೂಲ್ಯವಾದ ಪ್ರಥಮ ಪ್ರಾಶಸ್ತ್‌ಯದ ಮತವನ್ನು ನೀಡಬೇಕು ಎಂದು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಕ್ಷಿಣ ಶಿಕ್ಷಕ ಕ್ಷೇತ್ರದಲ್ಲಿ 20 ವರ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿರುವವರು ಶಿಕ್ಷಕರ ಸಮಸ್ಯೆ ಈಡೇರಿಸಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಕರ ಸಮಸ್ಯೆ ಈಡೇರಿಕೆಗೆ ಈ ಬಾರಿ ಕರ್ನಾಟಕ ಜನತಾ ಪಕ್ಷಕ್ಕೊಂದು ಅವಕಾಶ ಮಾಡಿಕೊಡಬೇಕು ಎಂದರು. ಗೋಷ್ಠಿಯಲ್ಲಿ ಅಭ್ಯರ್ಥಿ ಎಂ.ನಾಗೇಂದ್ರ ಬಾಬು, ನಂಜುಂಡನಾಯಕ, ಶಂಭುನಾಯಕ, ಬಿ.ಪ್ರಭುಸ್ವಾಮಿ ಹಾಜರಿದ್ದರು.